ಅಕ್ಷರ ದಾಸೋಹದ ತೊಗರಿಬೆಳೆಯಲ್ಲಿ ನುಸಿ ಹುಳು!

| Published : Nov 24 2025, 03:00 AM IST

ಸಾರಾಂಶ

ಮಧ್ಯಾಹ್ನದ ಬಿಸಿಯೂಟದ ಅಕ್ಷರದಾಸೋಹ ಯೋಜನೆಗೆ ತಾಲೂಕಿನಲ್ಲಿ ಒದಗಿಸಿದ ತೊಗರಿಬೆಳೆಯು ಕಳಪೆ ಮಟ್ಟದ್ದಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಇದನ್ನು ಇಲ್ಲಿನ ದೇಶಪಾಂಡೆ ಆಶ್ರಯ ನಗರದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಮಿತಿಯು ಬಹಿರಂಗಪಡಿಸಿದೆ.

ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ವಿತರಣೆ: ಪಾಲಕರಿಂದ ಆಕ್ರೋಶಕನ್ನಡಪ್ರಭ ವಾರ್ತೆ ಹಳಿಯಾಳ

ಮಧ್ಯಾಹ್ನದ ಬಿಸಿಯೂಟದ ಅಕ್ಷರದಾಸೋಹ ಯೋಜನೆಗೆ ತಾಲೂಕಿನಲ್ಲಿ ಒದಗಿಸಿದ ತೊಗರಿಬೆಳೆಯು ಕಳಪೆ ಮಟ್ಟದ್ದಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಇದನ್ನು ಇಲ್ಲಿನ ದೇಶಪಾಂಡೆ ಆಶ್ರಯ ನಗರದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಮಿತಿಯು ಬಹಿರಂಗಪಡಿಸಿದೆ.

ಶನಿವಾರ ಮಧ್ಯಾಹ್ನ ಶಾಲೆಗೆ ಎಸ್.ಡಿ.ಎಂ.ಸಿ ಸಮಿತಿಯು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ತೀರಾ ಕಳಪೆಯಾಗಿರುವ ನುಸಿ-ಹುಳಮಿಶ್ರಿತವಾಗಿರುವ ಮುಗ್ಗಾಗಿರುವ ಬಿಳಿಪೌಡರ್‌ನಿಂದ ತುಂಬಿರುವ ತೊಗರಿಬೆಳೆಯ ಸಾರನ್ನು ಮಕ್ಕಳಿಗೆ ಬಡಿಸುವುದನ್ನು ಕಂಡು ಸಮಿತಿಯವರು ಆಕ್ಷೇಪಿಸಿದ್ದಾರೆ.

ಸಮಿತಿಯ ಸದಸ್ಯರ ಹಾಗೂ ಶಾಲೆಯ ಸಿಬ್ಬಂದಿಗಳ ಮಧ್ಯೆ ನಡೆದ ಮಾತಿನ ಸಪ್ಪಳ ಕೇಳಿ ಮಕ್ಕಳ ಪಾಲಕರು ಶಾಲೆಗೆ ಕುತೂಹಲದಿಂದ ಶಾಲೆಗೆ ಧಾವಿಸಿ ಬೆಳೆಯನ್ನು ಪರಿಶೀಲಿಸಿದರಲ್ಲದೇ, ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಇಂತಹ ಕಳಪೆ, ಮೂರನೇ ಗುಣಮಟ್ಟದ ತೊಗರಿಬೆಳೆ ವಿತರಿಸಲಾಗುತ್ತಿದೆ. ಇಂತಹ ಕಳಪೆ ಸಾಮಗ್ರಿಗಳಿಂದ ತಯಾರಿಸಿದ ಆಹಾರ ಸೇವಿಸಿ ಮಕ್ಕಳ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಎಸ್.ಡಿ.ಎಂ.ಸಿ ಸಮಿತಿ ಆಹಾರ ಸಾಮಗ್ರಿ ಶೇಖರಿಸಿಡುವ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರ ಪೂರೈಸಿದ ತೊಗರಿ ಬೆಳೆಯಲ್ಲಿ ನುಸಿ ಹುಳು ಕಂಡುಬಂದವು. ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಇಂತಹ ಕಳಪೆ ಆಹಾರ ಸಿದ್ದಪಡಿಸಿ ನೀಡುತ್ತಿದ್ದಾರೆ. ಈ ವಿಷಯವನ್ನು ಶಾಲಾಭಿವೃದ್ಧಿ ಸಮಿತಿಯವರು ಗಂಭೀರವಾಗಿ ಪರಿಗಣಿಸಿ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸಿದರು.