ಸಾರಾಂಶ
ಮಧ್ಯಾಹ್ನದ ಬಿಸಿಯೂಟದಲ್ಲಿ ನಿರಂತರವಾಗಿ ಹುಳ ಬರುತ್ತಿರುವುದರಿಂದ ಮುಖ್ಯಗುರುಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಇದಕ್ಕೆ ಕಾರಣವಾಗಿದ್ದು ಮುಖ್ಯಗುರುಗಳನ್ನು ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಶಾಲಾ ಮಕ್ಕಳಿಗೆ ಹಾಕುವ ಮಧ್ಯಾಹ್ನದ ಬಿಸಿಯೂಟದಲ್ಲಿ ನಿರಂತರವಾಗಿ ಹುಳ ಬರುತ್ತಿರುವುದರಿಂದ ಮುಖ್ಯಗುರುಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಇದಕ್ಕೆ ಕಾರಣವಾಗಿದ್ದು ಮುಖ್ಯಗುರುಗಳನ್ನು ಅಮಾನತು ಮಾಡಿ ಎಂದು ಪ್ರತಿಭಟನೆ ನಡೆಸಿ ಆಗ್ರಹಿಸಿದ ಘಟನೆ ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಶಾಲೆಯ ಮುಖ್ಯಗುರು ಶಂಕರ ಪರಿಯಾಣ ಅವರು ಮಕ್ಕಳ ಮೇಲೆ ಕಾಳಜಿ ವಹಿಸುತ್ತಿಲ್ಲ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಕಳಪೆ ಗುಣಮಟ್ಟದ ಬೇಳೆ ನೀಡುತ್ತಾರೆ, ಬಿಸಿಯೂಟದಲ್ಲಿ ಯಾವುದೇ ರೀತಿಯ ತರಕಾರಿ ಬಳಕೆ ಮಾಡಿಸುತ್ತಿಲ್ಲ. ಅಡುಗೆಯವರು ಬೇಳೆ ಸರಿಯಾಗಿಲ್ಲವೆಂದರೆ ಇಂತದ್ದೆ ಹಾಕಿ ಅಡುಗೆ ತಯಾರಿಸಿ ಎಂದು ಉದ್ದಟತನದಿಂದ ಮಾತನಾಡುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಮನಸೋ ಇಚ್ಚೆ ಬಂದು ಹೋಗುತ್ತಾರೆ. ಇಡೀ ಶಾಲಾ ಕಟ್ಟಡ ಮಳೆ ಬಂದರೆ ಸೋರುತ್ತದೆ. ಕುಸಿಯುವ ಭೀತಿಯಲ್ಲಿರುವ ಕೋಣೆಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಿಸಲಾಗುತ್ತಿದೆ. ಈ ಬೇಜವಾಬ್ದಾರಿಗೆ ನಮ್ಮೂರಿನ ಮಕ್ಕಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಮುಖ್ಯಗುರುಗಳು ನಮ್ಮೂರ ಶಾಲೆಗೆ ಬೇಡ ಎಂದು ಗ್ರಾಮಸ್ಥರು ಬಿಇಒ ಜ್ಯೋತಿ ಪಾಟೀಲ್ ಅವರಿಗೆ ದೂರು ಸಲ್ಲಿಸಿದರು.
ಗ್ರಾಮಸ್ಥರ ಅಹವಾಲು ಸ್ವಿಕರಿಸಿ ಮಾತನಾಡಿದ ಬಿಇಒ ಜ್ಯೋತಿ ಪಾಟೀಲ್ ಬಡದಾಳ ಶಾಲೆಯ ಬಿಸಿಯೂಟದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮೇಲಾಧಿಕಾರಿಗಳಿಗೆ ಈ ಕುರಿತು ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹ ತಾಲೂಕು ಅಧಿಕಾರಿ ದೇವಿಂದ್ರ ಸಜ್ಜನ, ಮುಖ್ಯಗುರು ಶಂಕರ ಪರಿಯಾಣ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಪಾಲಕರು, ಗ್ರಾಮಸ್ಥರು ಇದ್ದರು.