ಕಲೆ ಆರಾಧಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ

| Published : Jan 11 2025, 12:48 AM IST

ಸಾರಾಂಶ

ಟಿ.ಪಿ. ಅಕ್ಕಿಯವರ ಶ್ರಮದ ಫಲವಾಗಿ ಕಲಾ ಮಂದಿರ ಅಪಾರವಾಗಿ ಬೆಳೆದಿದೆ. ಕಲಾ ಕ್ಷೇತ್ರಕ್ಕೆ ಸರ್ಕಾರ ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡಿಲ್ಲ

ಗದಗ: ಕಲೆ ಎಂಬ ಶಕ್ತಿ ಸಿದ್ದಿಸಿಕೊಳ್ಳುವುದು ಮಹಾ ಕಠಿಣ ತಪಸ್ಸಿನಿಂದ ಮಾತ್ರ ಸಾಧ್ಯ. ಅಂತಹ ಕಲೆ ಆರಾಧಿಸುತ್ತ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ವಿಜಯ ಕಲಾಮಂದಿರ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾ ಮಹರ್ಷಿ ಟಿ.ಪಿ. ಅಕ್ಕಿ ಬೆಳ್ಳಿ ಪದಕ ಪ್ರಶಸ್ತಿ ಪ್ರದಾನ, ಕಲಾ ಪ್ರದರ್ಶನ ಹಾಗೂ ಕಲಾವಿದ ಎಸ್. ಕೆ.ಪತ್ತಾರ ಅವರ ಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಟಿ.ಪಿ. ಅಕ್ಕಿಯವರ ಶ್ರಮದ ಫಲವಾಗಿ ಕಲಾ ಮಂದಿರ ಅಪಾರವಾಗಿ ಬೆಳೆದಿದೆ. ಕಲಾ ಕ್ಷೇತ್ರಕ್ಕೆ ಸರ್ಕಾರ ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡಿಲ್ಲ.ಈ ಕ್ರಮವಾಗಿ ಕಲಾವಿದರು ಸರ್ಕಾರದ ಗಮನಕ್ಕೆ ತರುವುದರ ಮೂಲಕ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ. ಈ ಕುರಿತು ಸಚಿವರ ಗಮನಕ್ಕೆ ಪ್ರಸ್ತಾಪ ಮಾಡಲು ಸಹಕಾರ ಮಾಡುತ್ತೇವೆ ಎಂದರು.

ಚಿತ್ರಕಲಾ ಕ್ಷೇತ್ರದ ಪ್ರಮುಖ್ಯತೆ ಮತ್ತು ಅವಕಾಶ ಕುರಿತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಾನ ಮುದಕವಿ ಉಪನ್ಯಾಸ ನೀಡಿ, ಕಲೆ ಮಾನವನ ಮೂಲ ಭಾಷೆಯಾಗಿದೆ. ಮಕ್ಕಳ ಶಿಕ್ಷಣ ಚಿತ್ರಕಲೆಯಿಂದ ಪ್ರಾರಂಭವಾಗುತ್ತದೆ. ಅರವತ್ನಾಲ್ಕು ಕಲೆಗಳಲ್ಲಿ ಏಳು ಲಲಿತ ಕಲೆಗಳು ಆತ್ಮಾನಂದ ನೀಡುವ ಕಲೆಗಳಾಗಿವೆ. ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಇಂದು ಎಲ್ಲ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಮತ್ತು ವಿಸ್ತಾರತೆ ಹೆಚ್ಚಿಸಿಕೊಂಡಿದೆ. ಆಧುನಿಕ ದಿನಮಾನದಲ್ಲಿ ಕಲೆ ಮತ್ತು ಕಲಾವಿದರಿಗೆ ಅಮೋಘ ಅವಕಾಶಗಳು ಇವೆ. ಕಲಾ ಪದವಿ ನಂತರದಲ್ಲಿ ನಿರಂತರ ಅಧ್ಯಯನ ಮತ್ತು ಹೋರಾಟದಿಂದ ಹಲವಾರು ಅವಕಾಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಭವ್ಯ ಪರಂಪರೆ ಹೊಂದಿದ ಕಲಾ ಪರಂಪರೆಯ ಇತಿಹಾಸ ಅರಿಯಬೇಕು ಅಂದರೆ ಮಾತ್ರ ಇತಿಹಾಸ ಸೃಷ್ಠಿಸಲು ಸಾಧ್ಯ.ಸರ್ಕಾರ ಕೊಡುವ ಅವಕಾಶಕ್ಕಿಂತಲೂ ಕಲಾಕ್ಷೇತ್ರಕ್ಕೆ ವಾಣಿಜ್ಯ ಕ್ಷೇತ್ರದಲ್ಲಿ ಅವಕಾಶ ಇರುವುದರ ಜತೆಗೆ ವಾಣಿಜ್ಯ ಬೆಳವಣಿಗೆಯ ಶಕ್ತಿಯಾಗಿ ಕಲೆ ಬೆಳೆದಿದೆ. ಏಕೆಂದರೆ ಇಂದು ಆಕರ್ಷಣೆಯೇ ವಾಣಿಜ್ಯ ಕ್ಷೇತ್ರದ ಜೀವಾಳವಾಗಿರುವುದರಿಂದ ಕಲೆ ಕಲಾವಿದ ಅವಶ್ಯಕವಾಗಿದ್ದಾನೆ ಎಂದು ತಿಳಿಸಿದರು.

ಈ ವೇಳೆ ಸಾಂಪ್ರದಾಯಿಕ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಲಾಮಹರ್ಷಿ ಟಿ.ಪಿ. ಅಕ್ಕಿ ಬೆಳ್ಳಿ ಪದಕ ಪ್ರಶಸ್ತಿ, ಮೆರೀಟ್ ಅವಾರ್ಡ್‌ ಪ್ರಶಸ್ತಿಗಳನ್ನು ನೀಡಲಾಯಿತು. ವಿಜಯ ಕಲಾಮಂದಿರ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕಲಾಪ್ರದರ್ಶನ ಮತ್ತು ಕಲಾವಿದ ಎಸ್.ಕೆ. ಪತ್ತಾರ ಅವರ ಕಲಾ ಪ್ರಾತ್ಯಕ್ಷತೆ ಜರುಗಿತು.

ಹಿರಿಯ ತೆರಿಗೆ ಸಲಹೆಗಾರ ಮುಕುಂದ ಪೋತ್ನಿಸ್, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ, ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಟಿ.ಅಕ್ಕಿ, ಪ್ರಾ.ಕೆ.ಎಂ.ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿದರು. ಪ್ರೊ. ಶರಣಪ್ಪ ಬಿ.ಎಚ್. ವಂದಿಸಿದರು.