ಸಾರಾಂಶ
ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ ಪುಣ್ಯತಿಥಿ ಆಚರಿಸಲು ಹಿಂಡಲಗಾ ಕೇಂದ್ರ ಕಾರಾಗೃಹದ ಆವರಣದಲ್ಲಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಹಿಂದೂ ಕಾರ್ಯಕರ್ತರು ಶ್ರೀರಾಮಸೇನೆಯೊಂದಿಗೆ ಕಾರಾಗೃಹದ ಮುಂಭಾಗದಲ್ಲಿ ಸಾವರ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ ಪುಣ್ಯತಿಥಿ ಆಚರಿಸಲು ಹಿಂಡಲಗಾ ಕೇಂದ್ರ ಕಾರಾಗೃಹದ ಆವರಣದಲ್ಲಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಹಿಂದೂ ಕಾರ್ಯಕರ್ತರು ಶ್ರೀರಾಮಸೇನೆಯೊಂದಿಗೆ ಕಾರಾಗೃಹದ ಮುಂಭಾಗದಲ್ಲಿ ಸಾವರ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಂಡಲಗಾ ಕಾರಾಗೃಹದ ಆವರಣಕ್ಕೆ ತೆರಳಿದ ಸಮಯದಲ್ಲಿ ಸಾವರ್ಕರ ಭಾವಚಿತ್ರ ಪೂಜೆಗೆ ನಿರಾಕರಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಹಿಂದೂ ಕಾರ್ಯಕರ್ತರು ಜೈಲಿನ ಹೊರಭಾಗದ ರಸ್ತೆಯಲ್ಲಿ ಸಾವರ್ಕರ್ ಅವರ ಭಾವಚಿತ್ರ ಇಟ್ಟು ಪೂಜಿಸಿದರು. ನಂತರ ಕಾರ್ಯಕರ್ತರು ಜೈಲು ಅಧೀಕ್ಷಕರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಜೈಲು ಅಧೀಕ್ಷಕರಿಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ಮುಖಂಡ ರವಿ ಕೋಕಿತಕರ ಮಾತನಾಡಿ, ಪ್ರತಿ ವರ್ಷ ಸಾವರ್ಕರ ಅವರ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಹಿಂಡಲಗಾ ಜೈಲಿನಲ್ಲಿ ಬ್ರಿಟಿಷರು ಸಾವರ್ಕರ್ ಇರಿಸಿದ್ದ ಸೆಲ್‌ಗೆ ಹೋಗಿ ಆಚರಿಸುತ್ತೇವೆ. ಅಂತಿಮವಾಗಿ ನಾನು ಜೈಲಿನ ಮುಂದೆ ಅದನ್ನು ಮಾಡಲು ಪ್ರಾರಂಭಿಸಿದೆ. ಆದರೆ ಈ ಬಾರಿ ಜೈಲು ಅಧೀಕ್ಷಕರು ಅನುಮತಿ ನಿರಾಕರಿಸಿದ್ದಾರೆ. ಇದು ಸ್ವಾತಂತ್ರ್ಯವೀರ ಸಾವರ್ಕರ ಮತ್ತು ಇಡೀ ದೇಶಕ್ಕೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ಜಾಧವ್, ಶ್ರೀರಾಮ ಸೇನೆ ಹಾಗೂ ಹಿಂದೂ ರಾಷ್ಟ್ರ ಸೇನೆ, ಭಾರತೀಯ ಜನತಾ ಪಾರ್ಟಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದ್ದರು.