ಕನ್ನಡಪ್ರಭ ವಾರ್ತೆ ಶಿರಾ

ಇಂದಿನ ಆಧುನಿಕತೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭಕ್ತಿ ಭಾವನೆಗಳನ್ನು ಮೈಗೂಡಿಸಿಕೊಂಡು ಭಗವಂತನನ್ನು ಆರಾಧಿಸುವುದರಿಂದ ನಮ್ಮ ಜೀವನದ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಆಶೀರ್ವಚನ ನೀಡಿ ಮಾತನಾಡಿದರು. ಅಮೆರಿಕಾ ದೇಶದ ದೊಡ್ಡಣ್ಣ ಎನಿಸಿಕೊಂಡಿದ್ದ ಈ ಹಿಂದಿನ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರು ಹೇಳುವಂತೆ ನನ್ನ ಜೇಬಿನಲ್ಲಿ ಶ್ರೀ ಆಂಜನೇಯ ಸ್ವಾಮಿ ಯಂತ್ರವನ್ನು ಯಾವಾಗಲೂ ನನ್ನ ಜೇಬಿನಲ್ಲಿ ಇಟ್ಟುಕೊಂಡಿರುತ್ತೇನೆ. ನನಗೆ ಯಾವುದೇ ಕಷ್ಟಗಳು ಸಮಸ್ಯೆಗಳು ಬಂದಾಗ ಆಂಜನೇಯಂತ್ರವನ್ನು ನೋಡಿ ಸ್ಮರಿಸಿಕೊಂಡು ನನ್ನ ಕಷ್ಟಕಾರ್ಪಣ್ಯಗಳನ್ನು ಈಡೇರಿಸಿಕೊಳ್ಳುತ್ತೇನೆ ಎಂದಿದ್ದರು. ಹಾಗೆಯೇ ಆಂಜನೇಯ ಭಕ್ತರಾಗಿ ನಿಸ್ವಾರ್ಥ ಸೇವೆ ಮತ್ತು ಭಕ್ತಿ ಭಾವನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಮುಕ್ತಿ ಪಡೆಯಬಹುದು ಎಂದರು.

ತಾಲೂಕು ಕುಂಚಿಟಿಗರ ಸಂಘದ ನಿರ್ದೇಶಕ ಹಾಗೂ ಬರಗೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಹಾಲುಗುಂಡೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಬರಗೂರಿನ ಮೂಲಕ ಬೇರೆ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದು ಇದನ್ನು ಮನಗಂಡು ಸ್ವಾಮಿಗಳನ್ನು ಬರಗೂರಿನಲ್ಲಿ ಸ್ವಾಗತಿಸಿ ಸದ್ಭಕ್ತರಿಗೆ ಆಶೀರ್ವಚನ ನೀಡುವ ಕುರಿತಾಗಿ ಕೇಳಿಕೊಂಡಾಗ ಅವರು ಸಮ್ಮತಿಸಿ ಬರಗೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇಂದು ಸ್ವಾಮೀಜಿಗಳನ್ನು ಬರಮಾಡಿಕೊಂಡು ಅವರನ್ನು ಸತ್ಕರಿಸಿ ದರ್ಶನ ಮಾಡುವ ಸೌಭಾಗ್ಯ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶ್ರೀಮಠದ ಕಾರ್ಯದರ್ಶಿ ಮಂಗಣ್ಣ ಸ್ವಾಮಿ,ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ, ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್. ಗೌಡ, ಆದಿಚುಂಚನಗಿರಿ ಪೊಲೀಸ್ ಎಸ್. ಪಿ. ಪುರುಷೋತ್ತಮ್, ಆಂಧ್ರಪ್ರದೇಶ ಮಾಜಿ ಸಚಿವ ನರಸೇಗೌಡ,ಮುಖಂಡರಾದ ಬಿ.ಬೊಪ್ಪಣ್ಣ, ಕೃಷ್ಣೆಗೌಡ, ಪುನೀತ್ ಗೌಡ,ಉಮೇಶ್ ಗೌಡ, ಬಿ. ಸಿ. ಸತೀಶ್ ರಂಗಾಪುರ ತಿಪ್ಪೇಸ್ವಾಮಿ, ಕುಳ್ಳ ಶ್ರೀಧರ್, ವಿ ಎಸ್ ಎಸ್‌ಎನ್ ಕಾರ್ಯನಿರ್ವಾಹಕ ತಿಮ್ಮರಾಜು, ಬಿಎಸ್ ಸಿದ್ದೇಶ್, ದಯಾನಂದ ಗೌಡ,ತನು ಸೇರಿದಂತೆ ಹಲವರು ಹಾಜರಿದ್ದರು.