ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಶಾಲೆಗಳಲ್ಲಿ ರಾಷ್ಟ್ರಕ್ಕೆ ಉಪಯುಕ್ತವಾಗುವಂತಹ ಹಬ್ಬಗಳ ಆಚರಣೆ ಮಾಡಿ ದೇವರ-ದಿಂಡಿರ ಪೂಜೆ ಸಲ್ಲ ಎಂದು ಸಾಹಿತಿ, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಯಾವುದೇ ಇಲಾಖೆಗಳಲ್ಲಿ ಧಾರ್ಮಿಕ ಆಚರಣೆ ಮಾಡಬಾರದು ಎಂಬ ನಿಯಮವಿದೆ. ಆದರೂ ಎಲ್ಲಾ ಇಲಾಖೆಗಳಲ್ಲಿ ಗಣಪತಿ ಪೋಟೋ ಹಾಕಿ ಪೂಜಿಸಲಾಗುತ್ತದೆ ಇದಕ್ಕೆ ಶಾಲೆಗಳು ಹೊರತಾಗಿಲ್ಲ. ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂದಿ ಜಯಂತಿ ಇಂತಹ ಆಚರಣೆಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಬಹುದು. ಆದರೆ ಗಣಪತಿ, ಸರಸ್ವತಿ ಪೂಜೆಯಿಂದ ಯಾವ ಭಕ್ತಿ ಮೂಡಿಸಬಹುದು ಎಂಬುದನ್ನು ಚಿಂತನೆ ಮಾಡಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಕೇವಲ ಕೆಲವು ವರ್ಗ, ಜಾತಿಗೆ ಸೀಮಿತವಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಶಿಕ್ಚಣವನ್ನು ಮಹಿಳೆಯರು, ದಲಿತರು ಸೇರಿದಂತೆ ಎಲ್ಲಾ ವರ್ಗದವರಿಗೆ ಕಲ್ಪಿಸಲಾಯಿತು. ಜ್ಞಾನ, ಕೌಶಲ್ಯದ ಬೆಳವಣಿಗೆಗೆ, ಆಧುನಿಕ ವಿಜ್ಞಾನ, ತಂತ್ರಜ್ಞಾನ ತಿಳಿಯಲು ಶಿಕ್ಷಣ ಅಗತ್ಯವಾಗಿದೆ. ದೇಶ ವೈವಿಧ್ಯಮಯ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಹೊಂದಿದ್ದು ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗುತ್ತಿಲ್ಲ. ಸಂವಿದಾನದ ಆಶಯಗಳ ಹೊರತಾಗಿ ರಾಷ್ಟ್ರ ನಿರ್ಮಾಣಕ್ಕೆ ಯಾವುದೇ ತಳಹದಿ ಇಲ್ಲ ಎಂದರು.ಯಾರು ಕತ್ತಲೆಯಿಂದ ಬೆಳಕಿನೆಡೆಗೆ ಕೆರೆದೊಯ್ಯುತ್ತಾರೋ ಅವರೇ ನಿಜವಾದ ಗುರುಗಳು. ಗುರುವಿಲ್ಲದೆ ನಮ್ಮ ಜೀವನ ನಡೆಯುವುದಿಲ್ಲ. ದೇಶ ವಿಶ್ವ ಗುರು ಆಗುವುದಕ್ಕಿಂತ ಮೊದಲು ಶಿಕ್ಷಣದ ಗುರುವಾಗಲಿ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಶಿಕ್ಷಕರಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಇರಬೇಕು. ಉತ್ತಮ ಶಿಕ್ಷಕನಿಂದ ಉತ್ತಮ ಪ್ರಜೆ ಹೊರಬರಲು ಸಾಧ್ಯ ಎಂಬುದನ್ನು ಶಿಕ್ಷಕರು ಆರಿಯಬೇಕಿದೆ. ಸರ್ಕಾರ ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಎಲ್ಲಾ ಮಕ್ಕಳನ್ನು ತೇರ್ಗಡೆ ಮಾಡಲು ಆದೇಶಿಸಿದೆ ಎಂದು ಶಿಕ್ಷಕರು ಮಕ್ಕಳ ಮೌಲ್ಯಮಾಪನ ಮಾಡದೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಶಾಲೆಗಳಲ್ಲಿ ಇಂದು ಅಂಕಗಳಿಗೆ ಸೀಮಿತವಾದ ಶಿಕ್ಷಣ ನೀಡಲಾಗುತ್ತಿದ್ದು, ಇದರಿಂದ ಶಿಕ್ಷಣವಂತರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೋರತು ಸಂಸ್ಕಾರವಂತರು ಸಿಗುತ್ತಿಲ್ಲ. ಶಿಕ್ಷಣದ ಜೊತೆ ಸಂಸ್ಕಾರ ನೀಡಿದಾಗ ಮಾತ್ರ ಪ್ರಬುದ್ಧತೆ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶಾಲೆಗಳ ಗುಣಮಟ್ಟ ಉತ್ತಮವಾಗಬೇಕಾದರೆ ಶಿಕ್ಷಕರು ಮೊದಲು ಸಿದ್ಧತೆ ಮಾಡಿಕೊಳ್ಳಬೇಕು. ಇಂದು ಅನೇಕ ಶಿಕ್ಷಕರು ಅಸಮರ್ಥತೆಯಿಂದ ವರ್ತಿಸುತ್ತಿರುವುದು ಶಿಕ್ಷಕ ಸಮುದಾಯಕ್ಕೆ ಶೋಭೆತರುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ತಾಪಂ ಇಒ ಸುನಿಲ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಂಗಾಧರ್, ಬಿಆರ್‌ಸಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ, ಪುರಸಭಾ ಸದಸ್ಯರಾದ ದೊಡ್ಡಯ್ಯ, ರಾಮಚಂದ್ರಪ್ಪ ಸೇರಿದಂತೆ ಶಿಕ್ಷಕರ ಕ್ಷೇತ್ರದ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಮುಖಂಡರು ಹಾಜರಿದ್ದರು.
ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೆ ಉತ್ತಮ ಶಾಲೆಗಳಿಗೂ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಿಂದ ಸಿದ್ದರಾಮೇಶ್ವರ ಸಮುದಾಯಭವನದ ವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.