ಪ್ರಕೃತಿ, ಕೃಷಿ ಬುದುಕು ಉಳಿದರೆ ದೈವಗಳ ಆರಾಧನೆ ಪರಿಪೂರ್ಣ: ಶ್ರೀಕಾಂತ್‌ ಶೆಟ್ಟಿ

| Published : Mar 09 2024, 01:32 AM IST

ಪ್ರಕೃತಿ, ಕೃಷಿ ಬುದುಕು ಉಳಿದರೆ ದೈವಗಳ ಆರಾಧನೆ ಪರಿಪೂರ್ಣ: ಶ್ರೀಕಾಂತ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾಯನಕೆರೆ ಸಮೀಪದ ರತ್ನಗಿರಿಯ ಸನ್ಯಾಸಿಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಪರ್ವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಲೇಖಕ ಶ್ರೀಕಾಂತ ಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದೈವಾರಾಧನೆ ತಾಂತ್ರಿಕ ಪರಂಪರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಒಂದು ತಾಂತ್ರಿಕವಾದ ಆರಾಧನ ಪರಂಪರೆ ಹಾಗೂ ಪದ್ಧತಿ ಇದೆ. ದೈವಗಳ ಪರಿರ್ಪೂಣವಾಗಿ ಆರಾಧನೆ ಆಗಬೇಕಾದರೆ ಪ್ರಕೃತಿ ಹಾಗೂ ಕೃಷಿ ಬದುಕು ಉಳಿಯಬೇಕು. ಜೀವನದಲ್ಲಿ ಕಷ್ಟಗಳು ಎದುರಾದರೆ ಬಗೆಹರಿಸುವ ಶಕ್ತಿ ದೈವಗಳಿಗೆ ಇದೆ ಎಂಬ ನಂಬಿಕೆಯಿಂದ ದೈವಗಳನ್ನು ಆರಾಧಿಸಿಕೊಂಡು ಬರಲಾಗಿದೆ. ದೈವರಾಧನೆ ಉಳಿಯಬೇಕಾದರೆ ನಂಬಿಕೆ ಬಲವಾಗಿರಬೇಕು. ದೈವದ ಮೇಲೆ ಇರುವ ನಂಬಿಕೆ ನಾಶವಾಗಬಾರದು. ಪ್ರದರ್ಶನಕ್ಕೆ ಇರಿಸಲಾದ ವಸ್ತುಗಳಿಗೆ ಸೀಮಿತವಾಗಬಾರದು ಎಂದು ಲೇಖಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಗುರುವಾಯನಕೆರೆ ಸಮೀಪದ ರತ್ನಗಿರಿಯ ಸನ್ಯಾಸಿಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಮಾ.೨ರಂದು ನಡೆದ ಪರ್ವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ನೆಮ್ಮದಿಯ ವಾತಾವರಣ ಸೃಷ್ಠಿಯಾಗಿದೆ-ವಿಶ್ವೇಷ್ ಕಿಣಿ:

ಸಮಿತಿಯ ಕಾರ್ಯಾಧ್ಯಕ್ಷ ವಿಶ್ವೇಷ್ ಕಿಣಿ ಮಾತನಾಡಿ ೬೦೦ ವರ್ಷಗಳ ಇತಿಹಾಸ ಇರುವ ಕ್ಷೇತ್ರ. ಮಕಡ್ಲಗುಡ್ಡೆ ಎಂಬುದು ಹೆಸರು. ೧೯೮೭ ನಂತರ ಈ ಕ್ಷೇತ್ರದಲ್ಲಿ ನಿರಂತರ ಆರಾಧನೆ ನಡೆಯುತ್ತಾ ಬರುತ್ತಿದೆ. ೨೦೦೫ರಲ್ಲಿ ಗುಳಿಗ ಪ್ರತಿಷ್ಠೆ ನಡೆಯಿತು. ಪ್ರತಿವರ್ಷ ನಿರಂತರವಾಗಿ ಕ್ಷೇತ್ರದಲ್ಲಿ ಗಗ್ಗರ ಸೇವೆ ನಡೆಯುತ್ತಾ ಬರುತ್ತಿದೆ. ಊರಿಗೆ ಬರುವ ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿಯ ವಾತಾವರಣ ಸೃಷ್ಠಿಯಾಗಿದೆ. ಅರ್ಥಪೂರ್ಣ ಕಾರ್ಯಕ್ರಮ ಇಲ್ಲಿ ನಡೆದಿದೆ. ನಾಗಾರಾಧನೆ ಮತ್ತು ದೈವ ದೇವರ ಆರಾಧನೆಯ ಅನುಗ್ರಹದಿಂದ ಈ ಕ್ಷೇತ್ರ ಬೆಳಗಿದೆ ಎಂದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್.ಡಿ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸಮಿತಿಯ ಉಪಾಧ್ಯಕ್ಷರಾದ ಅಜಿತ್ ಮೋಹನ್ ಶಿವಾಜಿನಗರ, ವೆಂಕಟರಮಣ ಆಚಾರ್ಯ ರತ್ನಗಿರಿ ಹಾಗೂ ಜೊತೆ ಕಾರ್ಯದರ್ಶಿ ಶರಣ್ ಕುಲಾಲ್ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಗೌರವಿಸಲಾಯಿತು. ಗಣೇಶ್ ಆಚಾರ್ಯ ವಂದಿಸಿದರು. ಎಚ್.ಕೆ.ನಯನಾಡು ನಿರೂಪಿಸಿದರು.ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಪ್ರಧಾನ ಸಂಚಾಲಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ಣಯಗಳನ್ನು ಮಂಡಿಸಿದರು.

ಕರಾವಳಿ ಜಿಲ್ಲೆಗಳ ಸಮಸ್ತ ಬಹುಸಂಖ್ಯಾತರು ದೈವಾರಾಧಕರಾದ ಕಾರಣ ಅವರ ನೆರವಿಗಾಗಿ ದೈವಾರಾಧಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ದೈವಾರಾಧನೆಯ ಕುರಿತಾಗಿ ನಿರಂತರ ಮೌಲಿಕ ಕಾರ್ಯಕ್ರಮಗಳು ನಡೆಯುವಂತಾಗಲು ದೈವಾರಾಧನ ಅಕಾಡೆಮಿ ಸ್ಥಾಪಿಸಬೇಕು. ದೈವಾರಾಧನೆಯ ನರ್ತಕರಿಗೆ, ಅರ್ಚಕರಿಗೆ, ಪರಿಚಾರಕರಿಗೆ ಮಾಸಾಶನ ನೀಡಬೇಕು. ದೈವಾರಾಧನೆ ಹಾಗೂ ಕರಾವಳಿ ಕಲೆಗಳ ಕುರಿತಾಗಿ ಆಳವಾಗಿ ಅಭ್ಯಾಸ ಮಾಡಲು ದೈವಾರಾಧನಾ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಬೇಕು. ದೈವಗಳ ಪಾರ್ದನ, ಸಂಧಿ, ಬೀರಗಳು ಅತ್ಯುತ್ತಮ ಜಾನಪದ ಸಾಹಿತ್ಯ ಪ್ರಕಾರಗಳು ಇವುಗಳನ್ನು ಶಾಲಾ ಪಠ್ಯ ಪುಸ್ತಕಕ್ಕೆ ಸೇರ್ಪಡೆ ಮಾಡಬೇಕು. ದೈವಾರಾಧನೆಯ ಅಧ್ಯಯನದ ಅಧ್ಯಾಯಗಳನ್ನು ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯಗಳಾಗಿ ನಿಯೋಜಿಸಬೇಕು. ದೈವಗಳ ಸಂವಹನ ಭಾಷೆಯಾದ ತುಳುವನ್ನು ಕರ್ನಾಟಕ ರಾಜ್ಯ ಸರ್ಕಾರ ೨ನೆಯ ಆಡಳಿತ ಭಾಷೆಯಾಗಿ ಸ್ವೀಕಾರ ಮಾಡಿ ಭಾರತದ ಸಂವಿಧಾನದ ೮ನೆಯ ಪರಿಚ್ಛೇದಕ್ಕೆ ಸೇರಿಸಲು ಕ್ರಮಕೈಗೊಳ್ಳಬೇಕು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೈವಾರಾಧನೆಯ ಪ್ರಕಾರ ಪೂಜಿಸಲ್ಪಡುವ ಅವಳಿ ವೀರರಾದ ಕೋಟಿ-ಚೆನ್ನಯರ ಹೆಸರನ್ನಿರಿಸಬೇಕು, ತುಳುನಾಡಿನ ಕೇಂದ್ರ ಭಾಗವಾದ ಮಂಗಳೂರಿನಲ್ಲಿ ದೈವಗಳ ಥೀಮ್ ಪಾರ್ಕ್ ಸ್ಥಾಪಿಸಬೇಕು. ದೈವಾರಾಧಕರ ಬೃಹತ್ ಸಮಾವೇಶ ಪರ್ವ ಬೆಳ್ತಂಗಡಿ ತಾಲೂಕಿನ ರತ್ನಗಿರಿಯಲ್ಲಿ ನಡೆದ ಸವಿನೆನಪಿಗಾಗಿ ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ದೈವರತ್ನ ಎಂದು ನಾಮಕರಣ ಮಾಡಬೇಕು ಎಂದು ೫ ದಿನಗಳ ಕಾಲ ನಡೆದ ಚರ್ಚೆಯಲ್ಲಿ ನಿಷ್ಕರ್ಷೆ ಮಾಡಿ ಸರಕಾರಕ್ಕೆ ಸಲ್ಲಿಸುತ್ತೇವೆ. ಪರ್ವ ನಿರ್ವಿಘ್ನವಾಗಿ ಸನ್ಯಾಸಿ ಗುಳಿಗ ಕೃಪೆಯಿಂದ ಕಾರ್ಯಕ್ರಮ ಅರ್ಥರ್ಪೂಣವಾಗಿ ಸಂಪನ್ನಗೊಂಡಿದೆ ಎಂದು ಸಂಪತ್ ಸುವರ್ಣ ತಿಳಿಸಿದರು.