ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎದರಾರೈ ಗುರುವೆ ಸಮನಾರೈ ... ಎಂದು ಮುನಿ ಪುಂಗವರ ಮಹಾಮಹಿಮೆ ಬಣ್ಣಿಸುವ ದಾಸರ ಕೀರ್ತನೆಗಳನ್ನು ಹೇಳುತ್ತ ಭಜನೆಯಲ್ಲಿ ತಲ್ಲೀನ ಭಕ್ತರ ತಂಡ ಒಂದೆಡೆಯಾದರೆ, ಮಧ್ವನಾಮ, ಜಯರಾಯರ ನಾಮಾವಳಿ ಭಜಿಸುತ್ತ ಜೈಕಾರ ಹೇಳುತ್ತಿದ್ದ ಭಕ್ತರ ದಂಡು ಮತ್ತೊಂದೆಡೆ, ಇವೆಲ್ಲದರೊಂದಿಗೆ ಭಕ್ತರು ಅನೇಕರು ಭಾವ ಪರವಶರಾಗಿ ಕುಣಿಯುತ್ತ ಜಯರಾಯರನ್ನು ಸ್ಮರಿಸುವಲ್ಲಿ ಮಗ್ನ.ಇವೆಲ್ಲ ನೋಟಗಳು ಇಲ್ಲಿನ ಕಾಗಿಣಾ ತೀರದ ಮೂಲ ವೃಂದಾವನ ತಾಣ ಮಳಖೇಡದಲ್ಲಿರುವ ಜಯತೀರ್ಥರ ವೃಂದಾವನ ಸಮುಚ್ಚಯದಲ್ಲಿ ಕಂಡು ಬಂದವು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಗುರುವಾರ ಜಯರಾಯರ ಮಧ್ಯಾರಾಧನೆ ಮಹೋತ್ಸವ ವೈಭವ, ಮಧ್ವರ ಗ್ರಂಥಗಳಿಗೆ ಟಿಪ್ಪಣಿ ಬರೆದು ಟೀಕಾಚಾರ್ಯರೆಂದೇ ಹೆಸರಾಗಿರುವ ಟೀಕಾಚಾರ್ಯರ ಮಧ್ಯಾರಾಧನಾ ಮಹೋತ್ಸವ ನಿಮಿತ್ತ ಗುರುವಾರ ಜೋಡು ರಥೋತ್ಸವ ಸಂಭ್ರಮದಲ್ಲಿ ಸಹಸ್ರಾರು ಭಕ್ತರು ಮಿಂದೆದ್ದರು.ಮಳೆಯನ್ನು ಲೆಕ್ಕಿಸದೆ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಕನ್ರಾಟ ರಾಜ್ಯ ಸೇರಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ ರಾಜ್ಯಗಳ ಅಪಾರ ಭಕ್ತ ಸಮೂಹ ರಥೋತ್ಸವದ ಸುಂದರ ದೃಶ್ಯ ಕಣ್ತುಂಬಿಕೊಂಡರು.
ಜಿಟಿ ಜಿಟಿಮಳೆಯಲ್ಲೂ ಅಪಾರ ಪ್ರಮಾಣದಲ್ಲಿ ಭಕ್ತರು ಮಳಖೇಡಕ್ಕೆ ಆಗಮಿಸಿದ್ದರು. ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಯರಗೋಳದಿಂದ ಶುರುವಾಗಿರುವ ಪರಮ ಪವಿತ್ರ ಆರಾಧನಾ ಮಹೋತ್ಸವ ಮೂಲ ವೃಂದಾವನ ಸನ್ನಿಧಾನ ಮಳಖೇಡದಲ್ಲಿ ವೈಭವದಿಂದ ಮುಂದುವರಿದಿದೆ. ಮಧ್ಯಾರಾಧನೆ ನಿಮಿತ್ತ ಜೋಡು ರಥೋತ್ಸವ ನಡೆಯಿತು.ವೃಂದಾವನಕ್ಕೆಪುಷ್ಪಾಲಂಕಾರ:
ಟೀಕಾರಾಯರ ಮೂಲ ವೃಂದಾವನದ ಪುಷ್ಪಾಲಂಕಾರ ಕಣ್ಮನ ಸೆಳೆಯುವಂತಿತ್ತು. ವಿವಿಧ ಪುಷ್ಪಗಳಿಂದ ಜಯತೀರ್ಥರ ಹಾಗೂ ಅಕ್ಷೋಭ್ಯತೀರ್ಥರ ಮೂಲ ವೃಂದಾವನಗಳಿಗೆ ವಿವಿಧ ಪ್ರಕಾರದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ಭಕ್ತರು ದರ್ಶನ ಪಡೆದು ಪುನೀತರಾದರು.ಜಯತೀರ್ಥರು ಇಂದ್ರಾಂಶ ಸಂಭೂತರೆಂದೇ ಖ್ಯಾತಿಯಾದವರು. ಹೀಗಾಗಿ ದೇವೇಂದ್ರನ ಸನ್ನಿಧಾನದಲ್ಲಿ ಶ್ರೀ ದಿಗ್ವಿಜಯ ಮೂಲರಾಮದೇವರ ಫೂಜೆ ನೋಡುವ ಸೌಭಾಗ್ಯ ಸೇರಿದ್ದ ಸಾವಿರಾರು ಭಕ್ತರಿಗೆ ಲಭಿಸಿತ್ತು. ಮಹಾ ತಪಸ್ವಿ, ಅಭಿನವ ರಘುತ್ತಮತೀರ್ಥರೆಂದೇ ಖ್ಯಾತರಾಗಿರುವ ಸತ್ಯಾತ್ಮತೀರ್ಥರು ರಾಮದೇವರ ಪೂಜೆ ನೆರವೇರಿಸಿದರು.
ವೈಭವೋಪೇತವಾಗಿ ನಡೆದ ಪೂಜೆಯಿಂದಾಗಿ ಅಲ್ಲಿ ಸೇರಿದ್ದವರಿಗೆಲ್ಲರಿಗೂ ದೇವಲೋಕವೆ ಧರೆಗಿಳಿದು ಬಂದ ಅನುಭೂತಿಯಾಗಿತ್ತು. ದೇವಲೋಕದಲ್ಲಿ ರಾಮದೇವರ ಪೂಜೆ ನಡೆಯುತ್ತಿದೆ ಎಂದು ಭಾಸವಾಗಿತ್ತು. ಇಂದ್ರನು ನೆಲೆಸಿದ ತಾಣದಲ್ಲಿ ರಾಮದೇವರ ಪೂಜೆ ನೋಡುವುದೇ ಒಂದು ಭಾಗ್ಯವೆಂದು ಅನೇಕರು ಕಣ್ಣು ರೆಪ್ಪೆ ಮಿಟುಕಿಸದಂತೆ ಪೂಜಾದಿಗಳಿಗೆ ಸಾಕ್ಷಿಯಾದರು.ಯಾವ ಜನ್ಮದ ಪುಣ್ಯದ ಫಲವೋ ಭಕ್ತರಿಗೆ ಇಂಥ ಅವಕಾಶ ಸಿಕ್ಕಿತ್ತು ಎಂದು ಸಂತಸಪಟ್ಟಕು. ಇಂದ್ರನ ಆಸ್ತಾನದಲ್ಲಿನ ರಾಮದೇವರಪೂಜಾ ವೈಭವ ನೋಡಲು ವರುಣನೆ ಧರೆಗಿಳಿದು ಬಂದಂತೆ ತುಂತುರು ಮಳೆ ಹನಿ ಬೆಳಗ್ಗೆಯಿಂದಲೇ ಶುರುವಾಗಿದ್ದು ಹಾಗೇ ಮುಂದುವರಿದಿತ್ತು. ಜಯರಾಯರು ತಪಸ್ಸು ಮಾಡಿರುವ ಯರಗೋಳದಲ್ಲಿ ಗಂಗಾ ಮಾತೆಯೇ ಇವರಿಗೆ ಒಲಿದು ಬಂದವಳು ಎಂಬ ಪ್ರತೀತಿ ಇದೆ. ಅದೇ ತೆರದಲ್ಲಿ ತುಂತುರು ಮಳೆಗಳ ರೂಪದಲ್ಲಿ ಗಂಗೆ ಗುರುವಾರವೂ ಧರೆಗಿಳಿದು ಬಂದು ಜಯರಾಯರ ಪಪೂಜೆ- ಆರಾಧನಾ ವೈಭವದಲ್ಲಿ ಪಾಲ್ಗೊಂಡಳು ಎಂದು ಸೇರಿದ್ದವರೆಲ್ಲರೂ ಚರ್ಚಿಸಿದರು.
ತಣ್ಣಗಿನ ಗಾಳಿ ಲೆಕ್ಕಿಸದೆ ಕಾಗಿಣೆಯಲ್ಲಿ ಮಿಂದೆದ್ದ ಭಕ್ತರು:ಮಳಖೇಡದ ವೃಂದಾವನ ಪಕ್ಕದಲ್ಲಿಯೇ ಕಾಗಿಣಾ ನದಿ ಮೈದುಂಬಿಕೊಂಡು ಪ್ರವಹಿಸುತ್ತಿದೆ. ಈಗಂತೂ ಮಳೆಗಾಲ, ನಿರಂತರ ಮಳೆಗೆ ಕಾಗಿಣಾ ಉಕ್ಕೇರಿದೆ. ದೂರದ ಊರುಗಳಿಂದ ಆಗಮಿಸಿದ್ದ ಅಪಾರ ಭಕ್ತರು ಪವಿತ್ರ ಕಾಗಿಣಾನದಿಯಲ್ಲಿ ಸ್ನಾನಮಾಡಿ ಜಯತೀರ್ಥರ ವೃಂದಾವನಕ್ಕೆ ಭಕ್ತಿ ಪೂರ್ವಕ ಪ್ರದಕ್ಷಿಣೆ ಸೇವೆಗೈದರು.
ಬುಧವಾರ ರಾತ್ರಿ ಮಳಖೇಡಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದ ಭಕ್ತರು ಗುರುವಾರ ನಸುಕಿನ ಜಾವದಿಂದಲೇ ಕಾಗಿಣಾ ನದಿಯಲಿ ಸ್ಮಾನಮಾಡಿದರು. ಸರ್ವತೀರ್ಥಗಳಲ್ಲಿ ಸ್ನಾನ ಮಾಡಿದ ಪರಮ ಪುಣ್ಯಕರವಾದಂತಹ ಕಾಗಿಣಾ ನದಿಯಲ್ಲಿ ಮಾಡಿದರೆ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.