ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರು ಶಿವನ ಆರಾಧನೆ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಿಸಿದರು.
ಮೊಳಕಾಲ್ಮುರು: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರು ಶಿವನ ಆರಾಧನೆ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಿಸಿದರು.
ತಾಲೂಕಿನ ಬಾಂಡ್ರವಿ ಮುಖ್ಯ ಪ್ರಾಣದೇವರು ಬ್ರಹ್ಮಗಿರಿ ಬೆಟ್ಟ, ಜಟಂಗಿ ರಾಮೇಶ್ವರ, ನುಂಕಪ್ಪನ ಬೆಟ್ಟ, ದೇವ ಸಮುದ್ರ ಪರಮೇಶ್ವರಪ್ಪನ ಮಠ, ರಾಂಪುರ ಮುದುಕೇಶ್ವರ ಮಠ, ರುದ್ರಾಕ್ಷಿ ಮಠ, ಪರಶುರಾಮವದೂತರ ಮಠ, ಬಿಜಿಕೆರೆ ಆಂಜನೇಯ ಸ್ವಾಮಿ, ಮೊಗಲಹಳ್ಳಿ ಈಶ್ವರ ದೇವಸ್ಥಾನ, ಕೊಂಡ್ಲಹಳ್ಳಿ ಸಾಲೇಶ್ವರ, ಬಿಳಿ ನೀರು ಚಿಲುಮೆ ಸೇರಿದಂತೆ ಪಟ್ಟಣದ ಮೇಗಳ ಈಶ್ವರ, ಕೆಳಗಿನ ಈಶ್ವರ, ಮಾರ್ಕಂಡೇಯ, ಪಾಂಡುರಂಗ ಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಪ್ರತಿ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ 23 ದೇವಸ್ಥಾನಗಳಿಗೆ ವಿಶೇಷ ಪೂಜೆ ನೆರವೇರಿಸಲು ತಾಲೂಕು ಆಡಳಿತ ಗಂಗಾ ನದಿಯ ಗಂಗಾ ಜಲ ವಿತರಿಸಿದರು.
ದೇವಸ್ಥಾನಗಳಲ್ಲಿ ವಿಶೇಷವಾಗಿ ಅಲಂಕರಿಸಲಾಗಿದ್ದ ಈಶ್ವರನನ್ನು ಭಕ್ತಿಯಿಂದ ಆರಾಧಿಸಿದ ಜನತೆ ಇಡೀ ರಾತ್ರಿ ದೇವಸ್ಥಾನಗಲ್ಲಿ ಕಾಲ ಕಳೆದರು. ಶಿವನ ಆರಾಧನೆ, ಭಜನೆ, ಜಾಗರಣೆ ನಡೆದವು. ಹಣ್ಣು ಫಲಹಾರ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನಗಳನ್ನು ಶುಭ್ರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.