ಸಾರಾಂಶ
ಶಿರಸಿ:
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಾಗೂ ಮಂದಿರದ ಉದ್ಘಾಟನೆ ನಡೆಯುತ್ತಿದ್ದರೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಭು ಶ್ರೀರಾಮನಿಗೆ ಪೂಜೆ ಸಲ್ಲಿಸಿದರು. ರಾಮ ದೇವಾಲಯಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿದರು.ನಗರದ ಹಳೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕವಾಗಿ ಪ್ರಭು ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡಲಾಯಿತು. ಎತ್ತರದ ರಾಮನ ಕಟೌಟ್‌ಗೆ ಶಾಸಕ ಭೀಮಣ್ಣ ನಾಯ್ಕ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರಲ್ಲದೇ ಶ್ರೀರಾಮ ಜಯರಾಮ ಜಯಜಯ ರಾಮ ಎಂದು ರಾಮನಾಮ ಪಠಿಸಿದರು. ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ರಾಮಮಂದಿರ ನಿರ್ಮಾಣದ ಕನಸು ದೇಶದ ಪ್ರತಿಯೊಬ್ಬ ಹಿಂದೂಗಳ ಕನಸಾಗಿತ್ತು. ಆರಂಭದಲ್ಲಿ ರಾಜೀವಗಾಂಧಿ ಹಾಗೂ ಜೈಲ್‌ಸಿಂಗ್ ಅವರು ಈ ಕನಸನ್ನು ಬಿತ್ತಿದವರು. ೩ ದಶಕಗಳ ಹಿಂದೆಯೇ ಪ್ರತಿ ಹಳ್ಳಿ-ಹಳ್ಳಿಯಿಂದ ಇಟ್ಟಿಗೆ ಪೂಜೆ ಮಾಡಿ, ಕಾಣಿಕೆ ಹಾಕುವ ಮೂಲಕ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಜನ ಬಯಸಿದ್ದರು. ಆದರೆ ಎದುರಾದ ತೊಂದರೆ, ತೊಡಕುಗಳನ್ನು ನಿವಾರಿಸಿಕೊಂಡು ಮಂದಿರ ನಿರ್ಮಾಣ ಇದೀಗ ಕಾರ್ಯರೂಪಕ್ಕೆ ಬಂದಿದೆ. ಇದು ಎಲ್ಲರಿಗೂ ಸಂತಸ ತಂದಿದ್ದು ಈ ಸಂಭ್ರಮದ ಕ್ಷಣವನ್ನು ಭಕ್ತಿ-ಭಾವದ ಮೂಲಕ ಎಲ್ಲರೂ ಸೇರಿ ಆಚರಿಸುತ್ತಿದ್ದೇವೆ ಎಂದರು.ಪ್ರಭು ಶ್ರೀರಾಮಚಂದ್ರನು ಸರ್ವರಿಗೂ ಒಳಿತನ್ನು ಮಾಡಲಿ, ನಮ್ಮ ಪೂರ್ವಜರು ಕಂಡ ಕನಸು ಎಲ್ಲವೂ ಈಡೇರಲಿ, ರಾಮರಾಜ್ಯ ನಿರ್ಮಾಣವಾಗಲಿ, ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ, ಈ ದೇಶದ ಸತ್ಪ್ರಜೆಗಳು ಪ್ರೀತಿ, ವಿಶ್ವಾಸದಿಂದ ಬದುಕುವಂತೆ ಭಗವಂತ ಎಲ್ಲರನ್ನು ಕಾಪಾಡಲಿ ಎಂದು ಆಶಿಸಿದರು.ಇದೇ ವೇಳೆ ಶಾಸಕರು ಸಿಹಿ ಹಂಚಿದರಲ್ಲದೇ ಅಂಚಿನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪ್ರಮುಖರಾದ ಎಸ್.ಕೆ. ಭಾಗ್ವತ, ಜಗದೀಶ ಗೌಡ, ಶ್ರೀನಿವಾಸ ನಾಯ್ಕ, ಜ್ಯೋತಿ ಪಾಟೀಲ್, ರಘು ಕಾನಡೆ, ರಾಜು ಉಗ್ರಾಣಕರ, ಗಣೇಶ ದಾವಣಗೆರೆ ಪಾಲ್ಗೊಂಡರು.
ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಳ್ಳಿ-ಹಳ್ಳಿಯಲ್ಲಿ ಶ್ರೀರಾಮನ ಆರಾಧನೆ ಗಮನಿಸಿದರೆ ಸನಾತನ ಹಿಂದೂ ಧರ್ಮದ ಮೇಲೆ ಎಷ್ಟು ಭಕ್ತಿ ಇದೆ ಎಂಬುದು ತೋರಿಸುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.