ರಾಯರ ಆರಾಧನೆ ಪಂಚರಾತ್ರೋತ್ಸವ ಆರಂಭ

| Published : Aug 20 2024, 12:52 AM IST

ಸಾರಾಂಶ

ಧರ್ಮದ ರಕ್ಷಣೆ ವಿಶೇಷವಾಗಿ ಸುಮಂಗಲಿಯರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಕ್ಕಳಿಗೆ, ಮನೆಯಲ್ಲಿನ ಪುರುಷರಿಗೆ ಸಂಸ್ಕಾರ ನೀಡುವ ಮೂಲಕ ಧರ್ಮಸಂಘಟನೆ ಮಾಡಬೇಕು.

ಹುಬ್ಬಳ್ಳಿ:

ನೂರಾರು ಸುಮಂಗಲೆಯರ ಶೋಭಾನೆ ಪದ, ವಿಪ್ರರ ವಿಧ್ಯುಕ್ತ ವೇದಘೋಷ ಹಾಗೂ ಗೋಪೂಜೆ ಧ್ವಜಾರೋಹಣದೊಂದಿಗೆ ಶ್ರೀರಾಘವೇಂದ್ರ ತೀರ್ಥರ 353ನೇ ಆರಾಧನಾ ಮಹೋತ್ಸವ ಸೋಮವಾರ ಗೋಧೂಳಿ ಮುಹೂರ್ತದಲ್ಲಿ ಪ್ರಾರಂಭವಾಯಿತು.

ರಾಯರ ಆರಾಧನಾ ಮಹೋತ್ಸವದ ವಿಧಿಯಂತೆ ಧಾನ್ಯ, ಪೂಜೆ, ಅಷ್ಟಾವಧಾನ ಸೇವೆ ಗೋಪೂಜೆ ಅಲ್ಲದೆ ಲಕ್ಷ್ಮಿ ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಗುರುರಾಜಾಚಾರ್ಯ ಸಾಮಗ ಅವರಿಂದ ನಡೆದು ಬಂದಿತು.

ಮಠಾಧಿಕಾರಿ ರಾಘವೇಂದ್ರ ಆಚಾರ್ಯ, ವಿಚಾರಣಾ ಕರ್ತರಾದ ಎ.ಸಿ. ಗೋಪಾಲ, ಮಠದ ವ್ಯವಸ್ಥಾಪಕರಾದ ವೇಣುಗೋಪಾಲಾಚಾರ್ಯ ಅವರ ನೇತೃತ್ವದಲ್ಲಿ ಗೋವಿಂದ ಜೋಶಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ನಂತರ ವಿಧಿಯುಕ್ತವಾಗಿ ವಿಪ್ರರ ಮಂತ್ರಘೋಷಗಳೊಂದಿಗೆ ಗೋಪೂಜೆ ನೆರವೇರಿಸಿ ಗೋವಿಗೆ ಗೋಗ್ರಾಸ ಅರ್ಪಿಸಲಾಯಿತು. ರಾಘವೇಂದ್ರ ತೀರ್ಥರ ವೃಂದಾವನಕ್ಕೆ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿತಲ್ಲದೇ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಲಾಯಿತು. ಇದಕ್ಕೂ ಮುಂಚೆ ಋಗ್ವೇದಿ ಹಾಗೂ ಯಜುರ್ವೇದಿಯ ಉಪಕರ್ಮ ಯಜ್ಞೋಪವಿತಧಾರಣೆ ನಡೆಸಿಕೊಂಡು ಬರಲಾಯಿತು.

ಸತತ ಒಂದು ತಿಂಗಳ ಪರಿಯಂತ ಹರಿ ಭಜನೆ ಮಾಡೋ ನಿರಂತರ ಎಂಬ ಶೀರ್ಷಿಕೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದ ದಾಸ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಶ್ರೀ ಮಠದ ಸಹಯೋಗದಲ್ಲಿ ಭಜನಾ ಕಾರ್ಯಕ್ರಮ ಸಮಾಪನಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಸತ್ಯಮೂರ್ತಿ ಆಚಾರ್ ಅವರು, ಧರ್ಮದ ರಕ್ಷಣೆ ವಿಶೇಷವಾಗಿ ಸುಮಂಗಲಿಯರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಕ್ಕಳಿಗೆ, ಮನೆಯಲ್ಲಿನ ಪುರುಷರಿಗೆ ಸಂಸ್ಕಾರ ನೀಡುವ ಮೂಲಕ ಧರ್ಮಸಂಘಟನೆ ಮಾಡಬೇಕು ಎಂದು ಹೇಳಿದರು.

ಟಿಟಿಡಿ ದಾಸ ಪ್ರಾಜೆಕ್ಟಿನ ಧಾರವಾಡ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ ಮಾತನಾಡಿದರು. ಬಿಂದು ಮಾಧವ ಪುರೋಹಿತ, ಮನೋಹರ ಪರ್ವತಿ, ಶ್ರೀರಂಗ ಹನುಮಸಾಗರ, ರಘುವೀರ್ ಆಚಾರ್ಯ, ಗಿರೀಶ ಕುಲಕರ್ಣಿ, ವಾಸುದೇವ ಕಟ್ಟಿ, ಪ್ರಮೋದ ಗುನ್ನಾರಿ, ಸಂಜಯ ಅರ್ಚಕ, ಶ್ರೀಕಾಂತ ಗುಡಿ, ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.ಪೂರ್ವಾರಾಧನೆ ಇಂದು

ರಾಯರ ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ವಿಷ್ಣು ಸಹಸ್ರನಾಮ ರಾಯರ ಅಷ್ಟೋತ್ತರ ನಡೆಯಲಿವೆ.

ಬೆಳಗ್ಗೆ 11ಕ್ಕೆ ಕನಕ ಅಭಿಷೇಕ ನಂತರ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಭಜನಾ ಕಾರ್ಯಕ್ರಮ, ಅಷ್ಟಾವಧಾನ ಮಹಾಮಂಗಳಾರತಿ ಇತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.