ಶ್ರೀಗುರುಸಾರ್ವಭೌಮರ ಪೂರ್ವಾರಾಧನೆ

| Published : Aug 21 2024, 12:39 AM IST

ಸಾರಾಂಶ

ಆರಾಧನಾ ಮಹೋತ್ಸವದ ಪೂರ್ವಾರಾಧನೆ ಶ್ರೀಗುರುಸಾರ್ವಭೌಮರ ಮೂಲಬೃಂದಾವನದ ಮುಂಭಾಗದ ಹೊಸ್ತಿಲಿಗೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಸುವರ್ಣ ಲೇಪಿತ ಕವಚವನ್ನು ಅಳವಡಿಸಿದರು

ಕನ್ನಡಪ್ರಭ ವಾರ್ತೆ ರಾಯಚೂರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ನಿಮಿತ್ತ ಶ್ರೀಮಠದಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಗಳವಾರ ವೈಭವದಿಂದ ಜರುಗಿದವು.

ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಶ್ರೀಗುರುರಾಯರ ಆರಾಧನಾ ಮಹೋತ್ಸವ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಸಪ್ತರಾತ್ರೋತ್ಸವದ ಮೂರನೇ ದಿನ ಪೂರ್ವಾರಾಧನೆಯಲ್ಲಿ ಪ್ರಾತಃಕಾಲದಲ್ಲಿ ನಿರ್ಮಾಲ್ಯ ವಿಸರ್ಜನೆ, ಶ್ರೀ ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ನಡೆಸಲಾಯಿತು. ಬೆಳಗ್ಗೆ ಋಗ್ವೇದ ನಿತ್ಯನೂತನ ಉಪಕರ್ಮ, ಯಜುರ್ವೇದ ನಿತ್ಯನೂತನ ಉಪಕರ್ಮಗಳು, ಬಳಿಕ ಬೆಂಗಳೂರಿನ ವಿದ್ವಾನ್ ಬಿ.ಎನ್‌.ವಿಜಯೀಂದ್ರಾಚಾರ್ಯ ಅವರಿಂದ ಪ್ರವಚನ ಕಾರ್ಯಕ್ರಮಗಳು ನಡೆಯಿತು.

ಕಳೆದ ವರ್ಷದಂತೆ ಈ ಬಾರಿಯೂ ಶ್ರೀಗುರುರಾಯರ ಪೂರ್ವಾರಾಧನೆ ನಿಮಿತ್ತ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಮಠದಿಂದ ಸ್ವಾಗತಿಸಿ, ಮೆರವಣಿಗೆಯನ್ನು ನಡೆಸಿ ಮೂಲಬೃಂದಾವನದ ಮುಂದಿರಿಸಿ ಮಂಗಳಾರತಿ ಮಾಡಿ ರಾಯರಿಗೆ ಸಮರ್ಪಿಸಿದರು. ನಂತರ ಪ್ರಾಕಾರದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದೊಂದಿಗೆ ಶ್ರೀಮಠವು ಹೊಂದಿರುವಂತಹ ಅನ್ಯೋನ್ಯ ಸಂಬಂಧದ ಮೆಲಕುಹಾಕಿದರು. ಇದೇ ವೇಳೆ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ್ದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ, ಪಂಡಿತರು, ಅಧಿಕಾರಿ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಬಳಿಕ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಶ್ರೀಮೂಲರಘುಪತಿ ವೇದವ್ಯಾಸದೇವರಿಗೆ ಸಂಸ್ಥಾನ ಪೂಜೆ, ಅಲಂಕಾರ ಸಮರ್ಪಣ ಹಾಗೂ ಅಸ್ತೋದಯ, ಮಹಾಮಂಗಳಾರತಿ ನೆರವೇರಿಸಿದರು. ಇದೇ ವೇಳೆ ಶ್ರೀ ಗುರುಸಾರ್ವಭೌಮರ ಮೂಲಬೃಂದಾವನದ ಮಂಟಪಕ್ಕೆ ಸುರ್ವಣ ಲೇಪಿತ ಕವಚ ನಿರ್ಮಾಣ ಹಿನ್ನೆಲೆ ಪ್ರಾಯೋಗಿಕವಾಗಿ ಮುಂಭಾಗದ ಹೊಸ್ತಿಲಿಗೆ ಬಂಗಾರದ ಕವಚವನ್ನು ತೊಡಿಸಿದ ಶ್ರೀಗಳು ಪೂರ್ವಾರಾಧನೆ ನಿಮಿತ್ತವಾಗಿ ವಿಶೇಷವಾಗಿ ಅಲಂಕಾರಗೊಂಡಿದ್ದ ಮೂಲಬೃಂದಾವನಕ್ಕೆ ಮಹಾಮಂಗಳಾರತಿ ಸೇವೆಗೈದರು. ಸಂಜೆ ಹಗಲು ದೀವಟಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವು ಅದ್ಧೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾಂಸರು,ಪಂಡಿತರು,ಅಧಿಕಾರಿ, ಸಿಬ್ಬಂದಿ ವರ್ಗದವರು ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಭಕ್ತರು ಇದ್ದರು.