ಕೋಟಿಲಿಂಗಗಳಿಗೆ ಭಕ್ತ ಸಮೂಹದ ನಮನ

| Published : Jan 02 2025, 12:31 AM IST

ಸಾರಾಂಶ

ಬುಧವಾರ ಬೆಳಗ್ಗೆ ದೇವಾಲಯದ ಅರ್ಚಕರಿಂದ ೧೦೮ ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು ೫೧ ಅಡಿ ಎತ್ತರದ ಶಿವಲಿಂಗಕ್ಕೆ ಹಾಲು, ತುಪ್ಪದ ಅಭಿಷೇಕವನ್ನು ಮಾಡಲಾಯಿತು, ನಂತರ ಹೂಗಳಿಂದ ಪುಷ್ಪಾರ್ಚನೆ ನೆರವೇರಿಸಲಾಯಿತು, ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

108 ಅಡಿ ಬೃಹತ್ ಶಿವಲಿಂಗಕ್ಕೆ ಹಾಲು, ತುಪ್ಪದ ಅಭಿಷೇಕ

ಕನ್ನಡಪ್ರಭ ವಾರ್ತೆ ಕೆಜಿಎಫ್

ನಗರದ ಹೊರವಲಯದ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಹೊಸ ವರ್ಷದ ಪ್ರಯುಕ್ತ ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಭಕ್ತರು ಹರಿದುಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದುಕೊಂಡರು.

ಕ್ಷೇತ್ರದಲ್ಲಿ ಹೊಸ ವರ್ಷದ ಪ್ರಯುಕ್ತ ಗಣೇಶನ ದೇವಾಲಯ, ಮಂಜುನಾಥ ದೇವಾಲಯ, ವೆಂಕಟೇಶ್ವರ ದೇವಾಲಯ, ಶ್ರೀದೇವಿ, ಭೂದೇವಿ, ಶನಿಸಿಂಗಾಪುರ, ಅಯ್ಯಪ್ಪ, ಸುಬ್ರಹ್ಮಣ್ಯ, ವಿಷ್ಣು ಮಹೇಶ್ವರ, ಕನ್ಯಕಾ ಪರಮೇಶ್ವರಿ, ದುರ್ಗಾದೇವಿ ದೇವಾಲಯಗಳಲ್ಲಿ ಹಾಗೂ ದೇವಾಲಯದ ಅವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಕೋಟಿಲಿಂಗಗಳಿಗೆ ನವ ದ್ರವ್ಯಗಳಿಂದ ವಿಶೇಷ ಪೂಜೆ, ಹೋಮ ಹವನಗಳನ್ನು ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಏರ್ಪಡಿಸಿದ್ದರು, ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಶಿವಲಿಂಗಗಳಿಗೆ ಭಕ್ತರು ಪೂಜೆಯನ್ನು ನೆರವೇರಿಸಿದರು.

ಬ್ರಹ್ಮ ರಥೋತ್ಸವದ ಪ್ರಯುಕ್ತ ಪೂಜಾ ವಿಧಿ,ವಿಧಾನಗಳನ್ನು ದೇವಾಲಯದ ಅರ್ಚಕರಿಂದ ನೆರವೇರಿಸಲಾಯಿತು, ಊರಿನ ಮುಖಂಡರಾದ ಎಸ್.ಎನ್.ರಾಜಗೋಪಾಲಗೌಡ ಹಾಗೂ ಆಡಳಿತಾಧಿಕಾರಿ ಕುಮಾರಿ ಕೆ.ವಿ. ರಥೋತ್ಸವಕ್ಕೆ ಚಾಲನೆ ನೀಡಿದರು.

೧೦೮ ಅಡಿ ಎತ್ತರದ ಶಿವಲಿಂಗಕ್ಕೆ ವಿಶೇಷ ಪೂಜೆ:

ಬುಧವಾರ ಬೆಳಗ್ಗೆ ದೇವಾಲಯದ ಅರ್ಚಕರಿಂದ ೧೦೮ ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು ೫೧ ಅಡಿ ಎತ್ತರದ ಶಿವಲಿಂಗಕ್ಕೆ ಹಾಲು, ತುಪ್ಪದ ಅಭಿಷೇಕವನ್ನು ಮಾಡಲಾಯಿತು, ನಂತರ ಹೂಗಳಿಂದ ಪುಷ್ಪಾರ್ಚನೆ ನೆರವೇರಿಸಲಾಯಿತು, ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಭಕ್ತರ ಸಮೂಹ:

ಹೊಸ ವರ್ಷದ ಪ್ರಯುಕ್ತ ಶಿವಲಿಂಗಗಳ ದರ್ಶನ ಮಾಡಲು ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಭಕ್ತರ ಸಮೂಹವೇ ಹರಿದು ಬಂದಿತು. ಕೋಟಿಲಿಂಗಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನದಾನ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.