ಸಾರಾಂಶ
ಜೋಕುಮಾರ ಬಡವರ ವಿನಾಯಕನೆಂದೂ ಕರೆಯಲಾಗುತ್ತದೆ. ಅಷ್ಟಮಿ ನಂತರ ಏಳು ದಿನಗಳ ಜೋಕುಮಾರಸ್ವಾಮಿಯನ್ನು ಪೂಜಿಸಿದರೆ ಉತ್ತಮ ಮಳೆ ಬರುತ್ತದೆ ಎಂದು ನಂಬಿಕೆ ಇದೆ.
ಹಾವೇರಿ: ಜಿಲ್ಲೆಯ ವಿವಿಧಡೆ ಗಣೇಶ ಚರ್ತುಥಿಯ ಐದನೇ ದಿನದಿಂದ ಹುಟ್ಟುವ ಜೋಕುಮಾರಸ್ವಾಮಿಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಳೆ ಮತ್ತು ಬೆಳೆಗಾಗಿ ಆಚರಿಸಲಾಗುವ ಹಬ್ಬವಾಗಿದ್ದು, ಈ ಆಚರಣೆಯಲ್ಲಿ ಮಣ್ಣಿನ ಜೋಕುಮಾರನ ಮೂರ್ತಿಯನ್ನು ಬಿದಿರಿನ ಬುಟ್ಟಿಯಲ್ಲಿಟ್ಟು ಮಹಿಳೆಯರು ಊರೂರು ಸುತ್ತುತ್ತಾ ಜಾನಪದ ಹಾಡು ಹಾಡುತ್ತಾರೆ.ಜೋಕುಮಾರ ಬಡವರ ವಿನಾಯಕನೆಂದೂ ಕರೆಯಲಾಗುತ್ತದೆ. ಅಷ್ಟಮಿ ನಂತರ ಏಳು ದಿನಗಳ ಜೋಕುಮಾರಸ್ವಾಮಿಯನ್ನು ಪೂಜಿಸಿದರೆ ಉತ್ತಮ ಮಳೆ ಬರುತ್ತದೆ ಎಂದು ನಂಬಿಕೆ ಇದೆ. ಈ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿ, ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿಟ್ಟು ಊರಿನಲ್ಲಿ ಸುತ್ತುತ್ತಾರೆ. ಗಣೇಶ ಚತುರ್ಥಿಯ ನಂತರ ಬರುವ ಅಷ್ಟಮಿಯಂದು ಜೋಕುಮಾರನು ಅಂಬಿಗರ ಕುಟುಂಬದಲ್ಲಿ ಜನಿಸಿ ಹುಣ್ಣಿಮೆಯಂದು ಅಗಸನ ಮನೆಯಲ್ಲಿ ಸಾಯುತ್ತಾನೆ ಎಂಬ ಪ್ರತೀತಿ ಇದೆ.
ಮಹಿಳೆಯರು ಮಣ್ಣಿನ ಜೋಕುಮಾರನ ಮೂರ್ತಿ ಹೊತ್ತು ಊರಿನ ಮುಖ್ಯ ಗಲ್ಲಿಗಳಿಗೆ ಹೋಗಿ ಕಟ್ಟೆಯ ಮೇಲೆ ಇಡುತ್ತಾರೆ. ಅಲ್ಲಿ ಜೋಕುಮಾರನಿಗೆ ಸಂಬಂಧಿಸಿದ ಜಾನಪದ ಹಾಡುಗಳನ್ನು ಹೇಳಲಾಗುತ್ತದೆ. ಮನೆಯವರು ಜೋಕುಮಾರನಿಗೆ ಜೋಳ, ಸಜ್ಜಿ, ಅಕ್ಕಿ, ಗೋಧಿ ಸೇರಿದಂತೆ ಧಾನ್ಯಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಪ್ರತಿಯಾಗಿ, ಮಹಿಳೆಯರು ಬೇವಿನ ಎಲೆಯಲ್ಲಿ ಕಪ್ಪು ಕಾಡಿಗೆ ಹಚ್ಚಿ ನುಚ್ಚು, ಬೆಣ್ಣೆ, ಮೆಣಸಿನಕಾಯಿ, ಜೋಳ ಇತ್ಯಾದಿಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ಜೋಕುಮಾರನನ್ನು ಪೂಜಿಸುವುದರಿಂದ ಮಳೆ, ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆಯಿದೆ.ಹಿರೇಕೆರೂರಿನಲ್ಲಿ ಗಣೇಶನ ವಿಸರ್ಜನೆಹಿರೇಕೆರೂರು: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಬಳಿಕ ವಿಸರ್ಜಿಸಲಾಯಿತು.
ಪಟ್ಟಣದ ಸರ್ವಜ್ಞ ವೃತ್ತದ ಮುಂಭಾಗದದಿಂದ ಅಲಂಕೃತ ಟ್ರ‍್ಯಾಕ್ಟರ್‌ನಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ನಂತರ ವಿಸರ್ಜನೆ ಮಾಡಲಾಯಿತು.ನಾಸಿಕ್ ಡೋಲ್, ಗೊಂಬೆ ಕುಣಿತ, ಚಂಡೆ ವಾದ್ಯ ಸೇರಿದಂತೆ ವಿವಿಧ ಕಲಾ ವಾದ್ಯಗಳು ಮೆರವಣಿಗೆಗೆ ರಂಗು ತಂದವು. ಮೆರವಣಿಗೆ ಉದ್ದಕ್ಕೂ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯುವಕರು, ಮಹಿಳೆಯರು ಡಿಜೆ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.ಶಾಸಕ ಯು.ಬಿ. ಬಣಕಾರ, ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.ಬಜರಂಗದಳದ ಜಿಲ್ಲಾ ಸಂಚಾಲಕ ಅನಿಲ ಹಲವಾಗಿಲ, ವಿನಯ ಕರ್ನೂಲ್, ಸಂತೋಷ ಬೆಳಗುತ್ತಿ, ವಿನಾಯಕ ಎತ್ತಿನಹಳ್ಳಿ, ನವೀನ್ ಕುರುಬರ ಸೇರಿದಂತೆ ಸಂಘಟನೆಯ ಪ್ರಮುಖರು, ಮುಖಂಡರು ಇದ್ದರು.