ಸಾರಾಂಶ
ಹಾವೇರಿ:ಉತ್ತರ ಕರ್ನಾಟಕ ಭಾಗದಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ಸೀಗೆ ಹುಣ್ಣಿಮೆ ಹಬ್ಬವನ್ನು ಮಂಗಳವಾರ ಜಿಲ್ಲೆಯ ರೈತ ಬಾಂಧವರು ಸಂಭ್ರಮದಿಂದ ಆಚರಣೆ ಮಾಡಿದರು.ಜಿಲ್ಲೆಯ ಹಾವೇರಿ, ಶಿಗ್ಗಾಂವಿ, ರಾಣಿಬೆನ್ನೂರ, ಸವಣೂರು, ಹಿರೇಕೆರೂರ, ಹಾನಗಲ್ಲ, ಬ್ಯಾಡಗಿ ಸೇರಿದಂತೆ ಜಿಲ್ಲಾದ್ಯಂತ ಗ್ರಾಮೀಣ ಹಾಗೂ ನಗರದ ಹಲವೆಡೆ ಸಾಂಪ್ರದಾಯಿಕವಾಗಿ ಸೀಗೆ ಹುಣ್ಣಿಮೆ ಹಬ್ಬವನ್ನು ಆಚರಿಸಿದರು. ಸಹಕುಟುಂಬ ಪರಿವಾರದೊಂದಿಗೆ ರೈತಾಪಿ ವರ್ಗದವರು ತಮ್ಮ ಹೊಲ ಗದ್ದೆಗಳಿಗೆ ತೆರಳಿ ಹಚ್ಚ ಹಸಿರುನಿಂದ ಕಂಗೊಳಿಸುತ್ತಿರುವ ಪೈರಿನ ಮಧ್ಯೆ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಉಡಿತುಂಬಿ, ಚೆರಗ ಚೆಲ್ಲುವ ಮೂಲಕ ಸಾಂಪ್ರದಾಯಿಕವಾಗಿ ಸೀಗೆ ಹುಣ್ಣಿಮೆಯ ಆಚರಿಸಿದರು. ರೈತರು, ರೈತ ಮಹಿಳೆಯರು ಮತ್ತು ಮಕ್ಕಳು ಭೂಮಿ ತಾಯಿಗೆ ಸೀಮಂತ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುವುದು ಎಲ್ಲೆಡೆ ಕಂಡುಬಂದಿತು.ಭೂತಾಯಿಗೆ ಸೀಮಂತ: ರೈತರು ತಮ್ಮ ಜಮೀನುಗಳಲ್ಲಿರುವ ಬನ್ನಿ ಮರದ ಬಳಿ ಅಥವಾ ಬೆಳೆದ ಪೈರುಗಳ ಮಧ್ಯೆ 5 ಜೋಳದ ದಂಟನ್ನು ತಂದು ನಿಲ್ಲಿಸಿ, ಅದರೊಳಗಡೆ ಚಿಕ್ಕದಾದ 5 ಕಲ್ಲುಗಳನ್ನು (ಪಂಚಪಾಂಡವರು) ಇಟ್ಟು ವಿಭೂತಿ, ಕುಂಕುಮ ಹಚ್ಚಿ ಪೂಜಿಸಿ, ಆರತಿ ಬೆಳಗುತ್ತಾರೆ. ಮಹಿಳೆಯರು ಮಕ್ಕಳೆಲ್ಲರೂ ಸೇರಿ ಭೂಮಿತಾಯಿಗೆ ಉಡಿ ತುಂಬುತ್ತಾರೆ. ನಂತರ ವಿವಿಧ ಬಗೆಯ ಖಾದ್ಯಗಳಿಂದ ತಯಾರಿಸಿದ ನೈವೇದ್ಯವನ್ನು ದೇವರಿಗೆ ಅರ್ಪಿಸಿ, ನಂತರ ಹೊಲದ ತುಂಬೆಲ್ಲಾ ಹುಲಿಗೋ ಹುಲಿಗೋ... ಎಂದು ಚೆರಗ ಚೆಲ್ಲಿ ರೈತನ ಅನ್ನದ ತುತ್ತನ್ನು ಭೂತಾಯಿಗೆ ಅರ್ಪಿಸಿದರು.ಚಕ್ಕಡಿ-ಬಂಡಿಗಳೊಂದಿಗೆ ಪಯಣ: ಸೀಗೆ ಹುಣ್ಣಿಮೆಯಂದು ರೈತನ ಮಿತ್ರ ಎತ್ತುಗಳ ಮೈತೊಳೆದು, ವಿವಿಧ ಬಣ್ಣಗಳನ್ನು ಹಚ್ಚಿ, ಗೆಜ್ಜೆಕಟ್ಟಿ, ಜುಲಾಗಳನ್ನು ಹಾಕಿ ಶೃಂಗರಿಸಲಾಗುತ್ತದೆ. ಅಕ್ಕಪಕ್ಕದ ಮನೆಯವರ ಜೊತೆಗೆ ಸಂಬಂಧಿಕರನ್ನು ಆಹ್ವಾನಿಸಿ ಎತ್ತಿನ ಬಂಡಿ, ಚಕ್ಕಡಿಗಳನ್ನು ಕಟ್ಟಿಕೊಂಡು ಹೊಲಗಳತ್ತ ಸಾಗುತ್ತಾರೆ. ಇನ್ನು ಕೆಲ ರೈತರು ಪಾದಯಾತ್ರೆ, ಸೈಕಲ್, ಬೈಕ್ ಹಾಗೂ ಟಾಟಾಎಸ್ ಗಾಡಿಯೊಳಗೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.ಮಕ್ಕಳಿಂದ ಆಟ: ಇನ್ನೂ ಗ್ರಾಮೀಣ ಪ್ರದೇಶದಲ್ಲಿ ದಸರಾ ಹಬ್ಬದ ರಜೆಯಲ್ಲಿರುವ ಮಕ್ಕಳು ಕೂಡ ಸೀಗೆ ಹುಣ್ಣಿಮೆಯನ್ನು ಸಂಭ್ರಮಿಸಿದರು. ಮಧ್ಯಾಹ್ನ ಮೃಷ್ಟಾನ್ನ ಭೋಜನ ಸವಿದ ಮಕ್ಕಳು ಕೂಡ ಸ್ನೇಹಿತರೊಂದಿಗೆ ಗಾಳಿ ಪಟವನ್ನು ಹಾರಿಸುವ ಮೂಲಕ ಹಬ್ಬ ಸಂಭ್ರಮಿಸಿದರು. ಕೆಲವರು ಕಣ್ಣಾಮುಚ್ಚಾಲೆ ಆಟವಾಡಿದರೆ, ಇನ್ನೂ ಕೆಲವರು ಮೊಬೈಲ್‌ನಲ್ಲಿ ಗೇಮ್ ಆಟ ಹಾಗೂ ರೀಲ್ಸ್ ನೋಡುವ ಮೂಲಕ ಹಬ್ಬ ಸಂಭ್ರಮಿಸಿದ್ದು ಕಂಡುಬಂದಿತು.ವಿವಿಧ ಬಗೆಯ ಖಾದ್ಯಗಳ ಭೋಜನ: ಸೀಗೆ ಹುಣ್ಣಿಮೆ ಹಬ್ಬವೆಂದರೆ ಸಾಕು ರೈತರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಮನೆಯಲ್ಲಿ ನಿರಂತರ ಮೂರು ದಿನಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿಕೊಳ್ಳುವಲ್ಲಿ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದರು. ಪ್ರಮುಖವಾಗಿ ಕಡಕ್ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೇಳ್ಳು ಚಟ್ನಿ, ಎಣ್ಣೆ ಹೋಳಿಗೆ, ಶೇಂಗಾ ಹೊಳಿಗೆ, ಕಡಬು, ಖರ್ಚಿಕಾಯಿ, ಸೆಂಡಿಗೆ, ಹಪ್ಪಳ, ಕೊಡಬಳಿ, ಚಕ್ಕಲಿ, ಒಡೆ, ಮಿರ್ಚಿ, ಕರಿದ ಮೆಣಸಿನಕಾಯಿ, ಎಣ್ಣುಗಾಯಿ ಪಲ್ಯ, ಕಡಲೆಕಾಳು ಪಲ್ಯ, ಹಿಟ್ಟಿನಪಲ್ಯ, ಪುಂಡಿಪಲ್ಯೆ, ಡೊಣ್ಣಗಾಯಿ ಪಲ್ಯ, ಅಕ್ಕಿಹುಗ್ಗಿ, ಮೊಸರು ಬುತ್ತಿ, ಅನ್ನ-ಸಾಂಬಾರು ಸೇರಿದಂತೆ ಮೃಷ್ಟಾನ್ನ ಭೋಜನವನ್ನು ಸವೆಯುವುದರ ಮೂಲಕ ಬಂದಿರುವ ಬೀಗರು ಬಿಜ್ಜರು ಜೊತೆಗೆ ಹಬ್ಬವನ್ನು ಸಂಭ್ರಮಿಸಿದರು.