ರಾಮನಗರ: ಮಾಜಿ ಪ್ರಧಾನಿ ದೇವೇಗೌಡರು ಯಾರನ್ನೆಲ್ಲ ಬೆಳೆಸಿದರೊ ಅವರೇ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರೂ ಸೇರಿದ್ದಾರೆ. ಮೊದಲ ಬಜೆಟ್ ಮಂಡಿಸಲು ದೇವೇಗೌಡರು ಅವಕಾಶ ಕೊಡದೆ ಹೋಗಿದ್ದರೆ ದಾಖಲೆ ಬಜೆಟ್ ಮಂಡಿಸಲು ಆಗುತ್ತಿತ್ತೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರ ಕುಟುಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಗಮನಿಸಿದ್ದೇನೆ. ಮುಖ್ಯಮಂತ್ರಿ ತಪ್ಪು ಸಂದೇಶ ಕೊಡುವ ಅಗತ್ಯ ಇಲ್ಲ. ಕುರಿ ಕಾಯುವವನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. 8 ವರ್ಷಕ್ಕೂ ಅಧಿಕ ಕಾಲ ಮುಖ್ಯಮಂತ್ರಿ ಯಾಗಿದ್ದಾರೆ. 35 ವರ್ಷ ರಾಜಕೀಯ ಅವಧಿಯಲ್ಲಿ ಯಾವುದಾದರು ಒಂದು ರೀತಿ ಅಧಿಕಾರ ಅನುಭವಿಸಿದ್ದಾರೆ. ದೇವರಾಜ ಅರಸು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಸಮುದಾಯ ಮುಂದಿಟ್ಟುಕೊಂಡು ರಕ್ಷಣೆ ಪಡೆಯುವುದು ಬೇಡ ಎಂದು ತಿರುಗೇಟು ನೀಡಿದರು.ಸಿದ್ದರಾಮಯ್ಯ 18ನೇ ಬಜೆಟ್ ಮಂಡನೆ ಮಾಡುತ್ತಿದ್ದರೆ ಅದಕ್ಕೆ ದೇವೇಗೌಡ ಮತ್ತು ಜನತಾ ದಳ ಪಕ್ಷವೇ ಕಾರಣ. ಅಂದು ಪಕ್ಷದಲ್ಲಿ ಅಗ್ರ ಗಣ್ಯ ನಾಯಕರಿದ್ದರೂ ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಮಾಜಿಕ ನ್ಯಾಯ ಬದ್ಧತೆಯಿಂದ ಬಜೆಟ್ ಮಂಡನೆ ಮಾಡಿಸಿದ್ದು ಇದೇ ದೇವೇಗೌಡರು ಎಂದು ಹೇಳಿದರು.
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಜನತೆ ಹೋರಾಟ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವರ್ಷದ ಹಿಂದೆ 2ಲಕ್ಷ 85 ಸಾವಿರ ಉದ್ಯೋಗ ಭರ್ತಿ ಮಾಡುತ್ತೇವೆಂದು ಹೇಳಿದ್ದರು. ವರ್ಷ ಕಳೆದರೂ ಯಾವುದೇ ಸರ್ಕಾರಿ ಹುದ್ದೆ ಭರ್ತಿ ಆಗಿಲ್ಲ. ಬದಲಿಗೆ ಕುರ್ಚಿಗಾಗಿ ಕುಸ್ತಿಯಲ್ಲಿ ತೊಡಗಿದ್ದಾರೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ 3ಸಾವಿರ ಯುವನಿಧಿ ಕೊಟ್ಟಿದ್ದೇವೆಂದು ಉಡಾಫೆ ಉತ್ತರ ಕೊಡುದ್ದಾರೆಂದು ಆಕ್ಷೇಪಿಸಿದರು.ಯುವನಿಧಿ ಬೇಡ; ಉದ್ಯೋಗ ಸೃಷ್ಟಿಸಿ:
ಸರ್ಕಾರ ಕೊಡುವ 2-3 ಸಾವಿರ ನಂಬಿಕೊಂಡು ಯಾರು ಬದುಕುತ್ತಿಲ್ಲ. ಸ್ವಾಭಿಮಾನದ ಬದುಕು ನಡೆಸಲು ಉದ್ಯೋಗ ಸೃಷ್ಟಿ ಮಾಡಬೇಕು. ಮುಖ್ಯಮಂತ್ರಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಹಾಗಾಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ವಿಸ್ತರಿಸುವುದರಲ್ಲಿ ಅನುಮಾನ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಬೀದಿಗೆ ಬರುತ್ತೆ :
ಕಾಂಗ್ರೆಸ್ ನ 31 ಶಾಸಕರು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವರ ಬದಲಾವಣೆ ಅಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಬದಲಾವಣೆ ಮಾಡುವ ಕೆಲಸ ಮಾಡಬೇಕು ಎಂದು ಏಳು ಕೋಟಿ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಈಗಲೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ತಿರಸ್ಕರಿಸಿ ಜನರು ಬೀದಿಗೆ ತಳ್ಳುತ್ತಾರೆ ಎಂದು ಹೇಳಿದರು.ಯಾವ ಸಚಿವ - ಶಾಸಕರನ್ನು ಬದಲಾವಣೆ ಮಾಡಿದರೂ ಏನೂ ಅಬಿವೃದ್ಧಿ ಕಾಣಲು ಆಗುವುದಿಲ್ಲ. ಇವರು ಇನ್ನೂ ಎರಡು ವರ್ಷದಲ್ಲಿ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡಿಕೊಂಡು ಜನ ಸಾಮಾನ್ಯರನ್ನು ಸಾಲಗಾರರನ್ನಾಗಿ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
-----------------------24ಕೆಆರ್ ಎಂಎನ್ 5.ಜೆಪಿಜಿ
ನಿಖಿಲ್ ಕುಮಾರಸ್ವಾಮಿ