ಸಾರಾಂಶ
ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದಾಗಿದೆ. ಜಿಜ್ಞಾಸೆ ಏನೆಂದರೆ ಬೆಂಗಳೂರು ದಕ್ಷಿಣ ಹೆಸರಿನಲ್ಲಿರುವ ತಾಲೂಕು, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರಗಳು ಯಾವುದು ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಗೆ ಬರುವುದೇ ಇಲ್ಲ.
ರಾಮನಗರ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದಾಗಿದೆ. ಜಿಜ್ಞಾಸೆ ಏನೆಂದರೆ ಬೆಂಗಳೂರು ದಕ್ಷಿಣ ಹೆಸರಿನಲ್ಲಿರುವ ತಾಲೂಕು, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರಗಳು ಯಾವುದು ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಗೆ ಬರುವುದೇ ಇಲ್ಲ. ಇದು ವಿಚಿತ್ರ ಎನಿಸಿದರು ಸತ್ಯ. ರಾಮನಗರ ಜಿಲ್ಲೆಯು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡಿದೆ.
ಈಗ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣ ಮಾಡಿದೆ.
ಈಗಾಗಲೇ ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಯಾವ ಕ್ಷೇತ್ರವೂ ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯೊಳಗೆ ಬರುವುದೇ ಇಲ್ಲ. ಬೆಂಗಳೂರು ದಕ್ಷಿಣ ತಾಲೂಕು ಬೆಂಗಳೂರು ನಗರ ಜಿಲ್ಲೆಗೆ ಸೇರುತ್ತದೆ. ಈ ತಾಲೂಕು ಬೆಂಗಳೂರು ಉತ್ತರ ತಾಲೂಕಿನ ದಕ್ಷಿಣಕ್ಕೆ ಮತ್ತು ಬೆಂಗಳೂರು ಪೂರ್ವ ತಾಲೂಕಿನ ಪಶ್ಚಿಮಕ್ಕಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಹೆಚ್ಚಿನ ಭಾಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹೆಚ್ಚಿನ ಭಾಗ ತಾಲೂಕಿನೊಳಗೆ ಬಂದರೆ, ವಿಧಾನಸಭಾ ಕ್ಷೇತ್ರದ ಹೆಚ್ಚಿನ ಭಾಗವು ಆನೇಕಲ್ ತಾಲೂಕಿನ ವ್ಯಾಪ್ತಿಗೆ ಬರುತ್ತದೆ.
ಬೆಂ.ದಕ್ಷಿಣ ಚುನಾವಣಾ ಕ್ಷೇತ್ರಗಳು:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಬಿಜೆಪಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಪ್ರಸ್ತುತ ಇದನ್ನು ಬಿಜೆಪಿಯಿಂದ ತೇಜಸ್ವಿ ಸೂರ್ಯ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯ ಅನಂತ ಕುಮಾರ್ ರವರು 6 ಅವಧಿವರೆಗೆ ಪ್ರತಿನಿಧಿಸಿದ್ದರು. ಅಂದರೆ 1996 ರಿಂದ 2019ರ ವರೆಗೆ ಚುನಾಯಿತರಾಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 1996ರಿಂದ ಅಸ್ತಿತ್ವದಲ್ಲಿದ್ದರೂ, ಹಿಂದಿನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪುನರ್ ವಿಂಗಡಣೆಯ ನಂತರ 2008ರಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ರಚನೆಗೊಂಡಿತು. ಈ ಕ್ಷೇತ್ರವನ್ನು ಸತತ ನಾಲ್ಕನೇ ಅವಧಿಗೆ ಬಿಜೆಪಿಯ ಎಂ. ಕೃಷ್ಣಪ್ಪ ಪ್ರತಿನಿಧಿಸುತ್ತಿದ್ದಾರೆ,
ಬೆಂ.ದಕ್ಷಿಣ ಜಿಲ್ಲೆ ವ್ಯಾಪ್ತಿಗೆ ಬರುವ ಕ್ಷೇತ್ರಗಳು:
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಇದನ್ನು ಬಿಜೆಪಿ ಸಂಸದ ಡಾ. ಸಿ.ಎನ್.ಮಂಜುನಾಥ್ ಪ್ರತಿನಿಧಿಸುತ್ತಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳು ಬೆಂಗಳೂರು ದಕ್ಷಿಣ ಜಿಲ್ಲೆಯ ಜೊತೆಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಲೋಕಸಭಾ, ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ.
ಅಭಿವೃದ್ಧಿಗೆ ವೇಗದ ಜೊತೆಗೆ ಗೊಂದಲವೂ ಮೂಡಲಿದೆ:
ಕರ್ನಾಟಕ ಸಚಿವ ಸಂಪುಟ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕ್ರಮವನ್ನು ಅನುಮೋದಿಸಿದೆ. ಇದು " ಬ್ರ್ಯಾಂಡ್ ಬೆಂಗಳೂರು " ಹೆಸರನ್ನು ಬಂಡವಾಳ ಮಾಡಿಕೊಳ್ಳುವ ಮೂಲಕ ಜಿಲ್ಲೆಯ ಮೂಲಸೌಕರ್ಯ ಕಲ್ಪಿಸುವ, ಅಭಿವೃದ್ಧಿಗೆ ವೇಗ ನೀಡುವ ಹಾಗೂ ರಿಯಲ್ ಎಸ್ಟೇಟ್ ಬೆಲೆಗಳ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಬೆಂಗಳೂರು ದಕ್ಷಿಣ ಜಿಲ್ಲೆ ಈಗಾಗಲೇ ಬೆಂಗಳೂರು ದಕ್ಷಿಣ ಹೆಸರಿನಲ್ಲಿರುವ ತಾಲೂಕು, ವಿಧಾನಸಭಾ, ಲೋಕಸಭಾ ಕ್ಷೇತ್ರಗಳ ವಿಚಾರದಲ್ಲಿ ಗೊಂದಲ ಮೂಡಿಸುತ್ತದೆ. ಇದು ಸಾಮಾನ್ಯ ವ್ಯಕ್ತಿಗೆ ಅಥವಾ ಇತ್ತೀಚೆಗೆ ವಲಸೆ ಬಂದವರಿಗೆ, ವಿಶೇಷವಾಗಿ ಚುನಾವಣೆಗಳು ಅಥವಾ ಆಸ್ತಿ ನೋಂದಣಿ ಸಮಯದಲ್ಲಿ ತುಂಬಾ ಗೊಂದಲ ಮೂಡಿಸುತ್ತದೆ.