ಕುಸ್ತಿ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ: ಡೀಸಿ ಡಾ.ಕುಮಾರ

| Published : Sep 29 2025, 01:03 AM IST

ಸಾರಾಂಶ

ಮಹಾರಾಜರ ಕಾಲದಿಂದಲೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. 2008ರಿಂದ ಶ್ರೀರಂಗಪಟ್ಟಣ ದಸರಾದಲ್ಲಿ ವಿಶೇಷವಾಗಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈಗಲೂ ಸಹ ಪ್ರತಿ ಊರಿನಲ್ಲೂ ಐದರಿಂದ ಆರು ಕುಸ್ತಿಪಟುಗಳು ಸಿಗುತ್ತಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಸರಾ ಅಂಗವಾಗಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಯು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ಆಧುನಿಕ ಯುಗದಲ್ಲಿ ಹೊಸ ಹೊಸ ಕ್ರೀಡೆಗಳು ಬೆಳೆಯುತ್ತಿವೆ. ಇದರಿಂದ ಗ್ರಾಮೀಣ ಕ್ರೀಡೆ ಕುಸ್ತಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.

ಕುಸ್ತಿ ಹಾಗೂ ಕುಸ್ತಿಪಟುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕುಸ್ತಿ ಪಂದ್ಯವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಎಲ್ಲರೂ ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗ್ರಾಮೀಣ ಬದುಕನ್ನು ಮರೆಯಬಾರದು ತಿಳಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಮಹಾರಾಜರ ಕಾಲದಿಂದಲೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. 2008ರಿಂದ ಶ್ರೀರಂಗಪಟ್ಟಣ ದಸರಾದಲ್ಲಿ ವಿಶೇಷವಾಗಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈಗಲೂ ಸಹ ಪ್ರತಿ ಊರಿನಲ್ಲೂ ಐದರಿಂದ ಆರು ಕುಸ್ತಿಪಟುಗಳು ಸಿಗುತ್ತಾರೆ. ಕುಸ್ತಿಯಂತಹ ಗ್ರಾಮೀಣ ಕ್ರೀಡೆಗಳನ್ನು ಬೆಳೆಸಬೇಕು. ಇದರಿಂದ ದೈಹಿಕ ದೃಢತೆ ಮತ್ತು ಆರೋಗ್ಯಕರ ಜೀವನ ನಡೆಸಬಹುದು ಎಂದರು.

ನಂತರ ಡೀಸಿ, ಎಡೀಸಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಅವರು ಕುಸ್ತಿಪಟುಗಳಿಗೆ ಶುಭಹಾರೈಸಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ದಿನೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಾಗಭೂಷಣ್ ಸೇರಿದಂತೆ ಇತರರು ಇದ್ದರು.

ಹೇಮಾ ನಾಗರಾಜ್ ಅವರಿಂದ ಕರಾಟೆ ಪ್ರದರ್ಶನ

ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಡೆದ ಕರಾಟೆ ಸ್ಪರ್ಧೆಯಲ್ಲಿ ನಿಹಾನ್ ಶೋಟಕನ್ ಕರಾಟೆ ತರಬೇತಿ ಸಂಸ್ಥೆ ವಿದ್ಯಾರ್ಥಿನಿ ಹೇಮಾ ನಾಗರಾಜ್ ಅವರ ಕರಾಟೆ ಪ್ರದರ್ಶನ ನೆರೆದಿದ್ದ ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿತು.

ಹೇಮಾ ನಾಗರಾಜ್ ಹಾಗೂ ಕರಾಟೆ ತರಬೇತಿದಾರ ಅಶೋಕ್ ಅವರಿಗೆಪುರಸಭೆ ಸದಸ್ಯ ಕೃಷ್ಣಣ್ಣ ಅವರು ಗೌರವ ಸಮರ್ಪಣೆ ಮಾಡಿದರು.