ಮಹಾರಾಷ್ಟ್ರ ಕೇಸರಿಗೆ ಭಾರತ ಕೇಸರಿ ಚಿತ್!
KannadaprabhaNewsNetwork | Published : Oct 06 2023, 01:21 AM IST / Updated: Oct 06 2023, 10:35 AM IST
ಮಹಾರಾಷ್ಟ್ರ ಕೇಸರಿಗೆ ಭಾರತ ಕೇಸರಿ ಚಿತ್!
ಸಾರಾಂಶ
ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಕುಸ್ತಿ ಮೊದಲ ಗೆದ್ದವರು ಯಾರು?
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು. ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರ ಹರಿದುಬಂದಿತ್ತು. ಕುಸ್ತಿಕಣದ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಭಾರತ್ ಕೇಸರಿ ಮತ್ತು ಮಹಾರಾಷ್ಟ್ರ ಕೇಸರಿ ನಡುವೆ ನಡೆದ ಕುಸ್ತಿಯಲ್ಲಿ ಕೇವಲ ೧೦ ನಿಮಿಷದ ಸಮಯದಲ್ಲಿ ಜಗಮಲ್ಲರು ಚಾಕಚಕ್ಯತೆಯುಳ್ಳ, ಒಳ ಮತ್ತು ಹೊರ ಢಾವ್‌ಗಳ ಪ್ರದರ್ಶಿಸಿ, ಪರಸ್ಪರರು ಪೇಚ್ ಹಾಕುವತ್ತ ಹವಣಿಸಿ, ನೆರೆದಿದ್ದ ೪೦ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಲ್ಲಿ ಅದಮ್ಯ ಕುತೂಹಲ ಕೆರಳಿಸಿದರು. ಅಂತಿಮವಾಗಿ ಭಾರತ್ ಕೇಸರಿಯ ಸಡಿಲ ಹಿಡಿತದ ಲಾಭ ಪಡೆದಿ ಬಲವಾದ ಹಿಡಿಪಟ್ಟು ಹಾಕಿದ ಮಹಾರಾಷ್ಟ್ರ ಕೇಸರಿ ಪುಣೆಯ ಕಿರಣ ಪೈಲ್ವಾನ್ ಭಗತ್ ಅವರು ಹಿಮಾಚಲ ಪ್ರದೇಶದ ಭಾರತ ಕೇಸರಿ ಪಾಲಿಂಧರ್ ಪೈಲ್ವಾನ್ ಮಥುರಾರನ್ನು ಏಕ್ ಚಿತ್ ಢಾವ್ ಮೂಲಕ ಕೆಳಗೆ ಕೆಡವಿ ಗೆಲವು ಸಾಧಿಸಿ, ಬೆಳ್ಳಿಗದೆಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಮದಗಜಗಳಂತೆ ಹೋರಾಟ ನಡೆಸಿದ ಕುಸ್ತಿಪಟುಗಳು ಜನರ ಪ್ರೋತ್ಸಾಹ, ಸಿಳ್ಳೆಯ ನಿನಾದದಿಂದ ಉನ್ಮತ್ತರಾಗಿ ಒಂದಕ್ಕಿಂತ ಒಂದು ಉತ್ತಮ ಢಾವ್‌ಗಳನ್ನು ಪ್ರದರ್ಶಿಸಿದರು. ಉಕಾಡ, ಒಳ ಟಾಂಗ್, ಹೊರ ಟಾಂಗ್, ದಿಶಾ, ಚಿತ್.. ಹೀಗೆ ವಿವಿಧ ಢಾವ್‌ಗಳು ಜಗಮಲ್ಲರ ಕಸ್ತಿಯಲ್ಲಿ ಕಂಡುಬಂದವು. ಪ್ರಥಮ ಸ್ಥಾನ ₹೨ ಲಕ್ಷ, ದ್ವಿತಿಯ ಸ್ಥಾನ ₹ ೧ ಲಕ್ಷ ಹಾಗು ಮೂರನೇಯ ಸ್ಥಾನಕ್ಕೆ ₹೭೫ ಲಕ್ಷ ಸೇರಿ ಅನೇಕ ಕುಸ್ತಿಪಟುಗಳಿಗೆ ವಿಶೇಷ ಬಹುಮಾನ ನೀಡುವ ಮೂಲಕ ಪ್ರಮುಖ ಮೂರು ಕುಸ್ತಿಗಳಲ್ಲಿ ಗೆದ್ದ ಕುಸ್ತಿ ಪಟುಗಳಿಗೆ ಬೆಳ್ಳಿಗದೆಗಳನ್ನು ನೀಡಲಾಯಿತು. ಬನಹಟ್ಟಿಯ ರಾಜೇಂದ್ರ ಭದ್ರಣ್ಣವರ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ೧೦೦ಕ್ಕೂ ಹೆಚ್ಚು ಕುಸ್ತಿಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್‌ಗಳನ್ನು ಹಾಕಿ ಕುಸ್ತಿಯಾಡಿ ನೆರೆದ ಜನರನ್ನು ರಂಜಿಸಿದರು. ಕುಸ್ತಿ ಆಡಿಸುವವರ ಗಮನಕ್ಕೆ ಬಾರದೇ ಅಚಾನಕ್ಕಾಗಿ ಏನಾದರೂ ತಪ್ಪುಗಳಾದರೆ ಸಾವಿರಾರು ಜನ ಕೇಕೆಹಾಕಿ ಕೆಲ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಿದರು. ಮಹಾರಾಷ್ಟ್ರ ಹಾಗು ಕರ್ನಾಟಕದ ಬಹುತೇಕ ನಗರಗಳಿಂದ ಇಲ್ಲಿನ ಕುಸ್ತಿಗಳನ್ನು ನೋಡಲು ವೀಕ್ಷಕರ ದಂಡೇ ಆಗಮಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ವಿಜೇತ ಕುಸ್ತಿಪಟುಗಳು ಇಲ್ಲಿ ಪಾಲ್ಗೊಂಡಿದ್ದು ವಿಶೇಷ.. ಕೊಲ್ಹಾಪುರದ ಪೈ.ನಾಗರಾಜ, ಪೈ.ಬಿಸಿಡೋಣಿ, ಗಂಗಾವೇಶದ ಪೈ.ಸಾಗರ, ಪೈ.ತಮಖಡೆ, ಬೆಳಗಾವಿಯ ಪೈ.ಸಂಗಮೇಶ ಕವಳ್ಳಿ, ಕೊಲ್ಹಾಪುರದ ಪೈ.ಶುಭಂ, ಪೈ.ಕೊಳೇಕರ, ಪೈ.ಶಿವಯ್ಯ, ಪೈ.ಪೂಜಾರಿ, ಪೈ.ಜಗದಾಳ, ಪೈ.ಹಣಮಂತ, ಪೈ.ಸುನೀಲ, ಪೈ.ಕರವತ್ತ ಸೇರಿ ನೂರಾರು ಕುಸ್ತಿಪಟುಗಳು ಕುಸ್ತಿ ಅಖಾಡದಲ್ಲಿ ಸೆಣಸಿ, ಕುಸ್ತಿ ಅಭಿಮಾನಿಗಳಿಗೆ ರಸದೌತಣ ನೀಡಿದರು.