ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಾಚೀನ ಕಲೆ ಕುಸ್ತಿ ಪಂದ್ಯಾವಳಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವ ಮೂಲಕ ಯುವ ಜನತೆಗೆ ಕಲೆಯನ್ನು ಪರಿಚಯಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮೈದಾನದಲ್ಲಿ ಗಂಗ ಜಯಂತಿ ಅಂಗವಾಗಿ ಶ್ರೀಗಂಗಾಪರಮೇಶ್ವರಿ ಯುವಕ ಗೆಳೆಯರ ಬಳಗ, ಶ್ರೀರಾಮರೂಢಸ್ವಾಮಿ ಮಠದ 10 ಜನಗಳ ಗರಡಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರ ಮಟ್ಟದ ಪಾರಂಪರಿಕ 30 ಜೊತೆ ನಾಡಕುಸ್ತಿ ಪಂದ್ಯಾವಳಿ ವೇಳೆ ಮಾತನಾಡಿದರು.

ಕುಸ್ತಿ ಕ್ರೀಡೆಯೂ ಯುವಕರ ದೈಹಿಕ ಶಕ್ತಿ, ಯುಕ್ತಿಯನ್ನು ಹೊಂದಿದೆ. ಸಾಹಸದ ಸಂಕೇತವಾಗಿ ಮೈಸೂರು ಅರಸರ ಕಾಲದಿಂದಲೂ ವಿಶೇಷ ಪ್ರೋತ್ಸಾಹವನ್ನು ನಾಡಕುಸ್ತಿಗೆ ನೀಡಲಾಗುತ್ತಿದೆ. ಪಟ್ಟಣದ ರಾಮರೂಢಸ್ವಾಮಿ ಮಠದ 10 ಜನಗಳ ಗರಡಿಯಲ್ಲಿ ಕಳೆದ 100 ವರ್ಷಗಳ ಹಿಂದಿನಿಂದಲೂ ನೂರಾರು ಪೈಲ್ವಾನರು ರೂಪುಗೊಂಡು ರಾಷ್ಟಾದ್ಯಂತ ಪ್ರದರ್ಶನಗೊಳಿಸಿ ತಾಲೂಕಿಗೆ ಕೀರ್ತಿ ತರುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಾಗಲಕೋಟೆ ರಾಮರೂಢಸ್ವಾಮಿ ಮಠದ ಪೀಠಾಧ್ಯಕ್ಷ ಪರಮರಾಮರೂಢ ಸ್ವಾಮೀಜಿ ಅವಕು ಪೈಲ್ವಾನರ ಬೆನ್ನು ತಟ್ಟುವಮೂಲಕ ಕುಸ್ತಿಗೆ ಚಾಲನೆ ನೀಡಿದರು. ಕುಸ್ತಿ ಅಖಾಡದ ಅಂಬಮಾತೆಗೆ ಮೈಸೂರು ಮಹಾ ನಗರಪಾಲಿಕೆ ಮಾಜಿ ಸದಸ್ಯ ರವಿಂದ್ರಕುಮಾರ್ ಪೂಜೆ ಸಲ್ಲಿಸಿ ಉದ್ಘಾಟಿಸಿದರು.


ಗಮನ ಸೆಳೆದ ಮಹಿಳಾ ಕುಸ್ತಿ ಪಂದ್ಯಾವಳಿ:

ಮೊಟ್ಟ ಮೊದಲ ಭಾರಿಗೆ ಮಳವಳ್ಳಿಯಲ್ಲಿ ಮಹಿಳಾ ಕುಸ್ತಿ ಪಂದ್ಯಾವಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪಂದ್ಯಾವಳಿಯಲ್ಲಿ ಬನ್ನೂರಿನ ಜಾವವಿ ಮತ್ತು ಸ್ವಪ್ನ ಸೆಣಸಾಟದಲ್ಲಿ ರಾಷ್ಟ್ರ ಮಟ್ಟದ ಚಿನ್ನದ ಪದವಿ ವಿಜೇತೆ ಜಾನವಿ ಜನಶೀಲರಾದರು. ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಕಾವ್ಯ, ಚೈತನ್ಯ, ಗಂಗಮ್ಮ ಹಡಪದ ಮತ್ತು ಖುಷಿ ಭಾಗವಹಿಸಿ ಸಮಾನ ಪ್ರಶಸ್ತಿ ಪಡೆದರು.

ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಪೈಲ್ವಾನರಾದ ಕಂಠಿರವ ಪ್ರಶಸ್ತಿ ವಿಜೇತ ಶಿವಾಯ ಪೂಜಾರು, ಕಾಂಮೇಶ್ ಪಾಟೀಲ್, ಸಂಜೀವ್ ಕೊರವರ್, ಬೆಳಗಾಂ ಪಂಕಜ್ ಪಾಟೀಲ್ ಸೇರಿದಂತೆ 30 ಜೋಡಿ ಪೈಲ್ವಾನರುಗಳು ಭಾಗವಹಿಸಿದ್ದವು.

ಪಂದ್ಯಾವಳಿ ನೇತೃತ್ವವನ್ನು ಪೈ. ಮಾದೇಶ್‌ ವಹಿಸಿದ್ದರು. ಈ ವೇಳೆ ಪೈಲ್ವಾನರಾದ ಜಗದೀಶ್, ಪುರುಷೋತಮ್, ಕುಮಾರ್, ಎಂ.ಎಸ್.ಮಂಜುನಾಥ್, ಮುಖಂಡರಾದ ಶಿವಮಾಧು, ಪುಟ್ಟಮಾದಯ್ಯ, ರೈಮಾನ್ ಮಹದೇವು, ಎಂ.ಎನ್ ಶಿವಸ್ವಾಮಿ, ಎಸ್ ಕಂಬರಾಜು ಸೇರಿದಂತೆ ಇತರರು ಇದ್ದರು.