ಸಾರಾಂಶ
ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಕಾಡುಗೊಲ್ಲ ಜನಾಂಗ ವಿಶಿಷ್ಟ ಆಚರಣೆ ವಿಚಾರ ಮೂಲಕ ಅಲೆಮಾರಿಗಳಾಗಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಿನ್ನಲೆ ಕಾಡು ಗೊಲ್ಲ ಜನಾಂಗದವರು ಜಾತಿ ಗಣತಿದಾರರ ನಮೂನೆಯ 541 ಕಾಲಂ ನಲ್ಲಿ ಜಾತಿಯನ್ನು ಕಾಡು ಗೊಲ್ಲ ಉಪ ಜಾತಿಯನ್ನು ಕಾಡು ಗೊಲ್ಲ ಧರ್ಮ ಬುಡಕಟ್ಟು ಎಂದು ನಮೂದಿಸಿ ಎಂದು ಹೆಗ್ಗುಂದ ವನಕಲ್ಲು ಮಠದ ಡಾ.ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಕಾಡುಗೊಲ್ಲ ಜನಾಂಗ ವಿಶಿಷ್ಟ ಆಚರಣೆ ವಿಚಾರ ಮೂಲಕ ಅಲೆಮಾರಿಗಳಾಗಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಿನ್ನಲೆ ಕಾಡು ಗೊಲ್ಲ ಜನಾಂಗದವರು ಜಾತಿ ಗಣತಿದಾರರ ನಮೂನೆಯ 541 ಕಾಲಂ ನಲ್ಲಿ ಜಾತಿಯನ್ನು ಕಾಡು ಗೊಲ್ಲ ಉಪ ಜಾತಿಯನ್ನು ಕಾಡು ಗೊಲ್ಲ ಧರ್ಮ ಬುಡಕಟ್ಟು ಎಂದು ನಮೂದಿಸಿ ಎಂದು ಹೆಗ್ಗುಂದ ವನಕಲ್ಲು ಮಠದ ಡಾ.ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಜಾತಿ ಪರ ವಿರೋಧ ನಮ್ಮಲ್ಲಿಲ್ಲ. ನಮ್ಮದು ಬುಡಕಟ್ಟು ಸಂಸ್ಕೃತಿ ಪರಂಪರೆ ಬೆಳೆಸಿದ ಕಾಡುಗೊಲ್ಲರು ನಾಗರಿಕ ಸಮಾಜದಿಂದ ದೂರ ಉಳಿದು ಹಟ್ಟಿಗಳ ನಿರ್ಮಾಣ ಮಾಡಿಕೊಂಡು ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ಅರ್ಹತೆ ಪಡೆದರೂ ನಮ್ಮಲ್ಲಿ ಒಗ್ಗಟ್ಟು ಕಾಣದೇ ಯಾವುದೇ ಸವಲತ್ತು ಗಳಿಸಲಾಗಿಲ್ಲ. ಈ ಹಿನ್ನೆಲೆ ಕಾಡು ಗೊಲ್ಲ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಬಿಂಬಿಸಿ ಜಾತಿಗಣತಿಯಲ್ಲಿ ಕಾಡು ಗೊಲ್ಲ ಎಂದೇ ಬರೆಸಿ ಎಂದು ಮನವಿ ಮಾಡಿದರು. ಮೊದಲಿನಿಂದಲೂ ಕಾಡು ಗೊಲ್ಲ ಜಾತಿಯ ಹೆಸರು ನಮೂದಿಸಲಾಗಿತ್ತು. ದೇಶ ವಿದೇಶಿ ಇತಿಹಾಸಕಾರರ ಬರವಣಿಗೆಯಲ್ಲಿ ಕಾಡುಗೊಲ್ಲ ಜನಾಂಗ ಹೆಸರು ಕಂಡು ಬಂದಿತ್ತು. 1930 ರಲ್ಲಿ ಮೈಸೂರು ಸಂಸ್ಥಾನ ಯಾದವ ಅಥವಾ ಗೊಲ್ಲ ಹೆಸರು ಪ್ರಸ್ತುತಗೊಂಡಿತ್ತು. ಇದೇ ಕಾಡುಗೊಲ್ಲ ಅಸ್ತಿತ್ವಕ್ಕೆ ಬಿದ್ದ ಕೊಡಲಿ ಪೆಟ್ಟು ಇದಾಗಿದೆ. ಧಾರ್ಮಿಕ, ಸಾಮಾಜಿಕ ಆಚಾರ ವಿಚಾರದಲ್ಲಿ ವಿಭಿನ್ನತೆ ಬುಡಕಟ್ಟು ಸಂಸ್ಕೃತಿ ತೋರುತ್ತದೆ. ಈ ಹಿನ್ನೆಲೆ ಎಸ್ಟಿ ಮೀಸಲಾತಿ ಸವಲತ್ತು ನಮಗೆ ದೊರೆಯಬೇಕಿದೆ. ನಮ್ಮ ಜನಾಂಗದವರು ಕಾಡು ಗೊಲ್ಲ ಎಂದೇ ಬರೆಸಿ ಎಂದು ಮತ್ತೊಮ್ಮೆ ಮನವಿ ಮಾಡಿದರು. ವಕೀಲ ಬಿ.ದೊಡ್ಡಯ್ಯ ಮಾತನಾಡಿ ಕಾಡು ಗೊಲ್ಲರ ಅಭ್ಯುದಯಕ್ಕೆ ಪ್ರಸ್ತುತ ನಡೆದಿರುವ ಜಾತಿ ಗಣತಿಯಲ್ಲಿ ಕಾಡು ಗೊಲ್ಲ ಎಂದೇ ನಮೂದಿಸಬೇಕಿದೆ. ರಾಜ್ಯದ 12 ಜಿಲ್ಲೆಯ 40 ತಾಲೂಕಿನಲ್ಲಿ ವಾಸ್ತವ್ಯ ಕಾಣುವ ಕಾಡು ಗೊಲ್ಲರು ವಿಭಿನ್ನ ವಿಶಿಷ್ಟ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮುಖ್ಯವಾಹಿನಿಯಿಂದ ದೂರ ಉಳಿದ ಕಾಡು ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕೂಡಾ ಸಿಕ್ಕಿಲ್ಲ. ಎಸ್ಟಿ ಪಟ್ಟಿಗೆ ಸೇರಿಸಲು ಬಿಡದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಗಮನ ಕೊಡದೆ ಜಾತಿ ಗಣತಿ ವೇಳೆ ಕಾಡು ಗೊಲ್ಲ ಎಂದೇ ನಮೂದಿಸಿ ಎಂದು ತಿಳಿಸಿದರು.ಜಾತಿಗಣತಿ ಜಾಗೃತಿ ಜಿಲ್ಲಾ ಉಸ್ತುವಾರಿ ದೊಡ್ಡೇಗೌಡ ಮಾತನಾಡಿ, ಹೋಬಳಿಯಲ್ಲಿ ಸಮಿತಿ ರಚಿಸಿ ಪ್ರತಿ ಹಟ್ಟಿಯಿಂದ ಇಬ್ಬರು ಯುವಕರನ್ನು ನೇಮಿಸಿ ಜಾಗೃತಿ ಕೆಲಸ ಮಾಡಲಾಗುತ್ತಿದೆ ಎಂದರು. ಮುಖಂಡ ಕಂಬೇರಹಟ್ಟಿ ನಾಗರಾಜು ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಯಶೋಧಮ್ಮ ಮುಖಂಡರಾದ ಶಿವಣ್ಣ, ಶಿರಾ ಈಶ್ವರಪ್ಪ, ಚಿಕ್ಕನಾಯಕನಹಳ್ಳಿ ಬಸವರಾಜು, ತಿಪಟೂರು ಬಾಲರಾಜು, ತುರುವೇಕೆರೆ ಬಸವರಾಜು, ರವೀಶ್, ನಾಗರಾಜು, ರವೀಶ್, ಅಯ್ಯಣ್ಣ, ಮಂಜುನಾಥ್, ನಿಂಗರಾಜು, ಮಹಾಲಿಂಗಯ್ಯ ಇತರರು ಇದ್ದರು.