ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಾದ್ಯಂತ ಸೆ.22ರಿಂದ 15 ದಿನ ನಡೆಯುವ ಜಾತಿಗಣತಿಯಲ್ಲಿ ಲಿಂಗಾಯತರು ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಹಾಗೂ ಇತರೆ ಕಾಲಂ, ಉಪ ಪಂಗಡದಲ್ಲಿ ನಿಮ್ಮ ಉಪ ಜಾತಿ ಅಥವಾ ಸಾಧ್ಯವಾದರೆ ಲಿಂಗಾಯತ ಅಂತಲೇ ಬರೆಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಕರೆ ನೀಡಿದೆ.ನಗರದ ಬಾಪೂಜಿ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದ ಒಕ್ಕೂಟದ ವಿವಿಧ ಮಠಾಧೀಶರು, ಜಾತಿಗಣತಿ ವೇಳೆ ಧರ್ಮ, ಜಾತಿ, ಉಪ ಜಾತಿ, ಇತರೆ ಕಾಲಂನಲ್ಲಿ ಲಿಂಗಾಯತ ಧರ್ಮೀಯರು ಏನು ಬರೆಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂಬ ಕೂಗಿಗೆ ಶಕ್ತಿ ತುಂಬುವಂತೆ ಸಂದೇಶ ನೀಡಿದರು.
ಲಿಂಗಾಯತ ಧರ್ಮ ಮತ್ತು ಬಸವ ಸಂಸ್ಕೃತಿ ಅವಸಾನದತ್ತ ಸಾಗುತ್ತಿದೆ. ಲಿಂಗಾಯತ ಧರ್ಮೀಯರು ಎಚ್ಚೆತ್ತುಕೊಳ್ಳಬೇಕು. ಅಭಿಯಾನತ ಆರಂಭದ ನಂತರ ನಾಡಿನಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆದಿದೆ. ಹೊಟ್ಟೆಕಿಚ್ಚು ಶುರುವಾಗಿದೆ. ಇಂತಹ ಸನ್ನಿವೇಶನದಲ್ಲಿ ಲಿಂಗಾಯತ ಧರ್ಮೀಯರು ಎಚ್ಚೆತ್ತುಕೊಳ್ಳಬೇಕು ಎಂದು ಬಹುತೇಕ ಸ್ವಾಮೀಜಿಗಳು ಒತ್ತಾಯಿಸಿದರು.ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರಿಯ ಲಿಂಗೈಕ್ಯ ಶ್ರೀಗಳು ನಾಲ್ಕು ದಶಕಗಳ ಕಾಲ ಬಸವ ಚಿಂತನೆಯನ್ನೇ ಹೊದ್ದಿದ್ದರು. ಹಿರಿಯ ಗುರುಗಳು ಎಂದಿಗೂ ಪ್ರಚಾರವನ್ನು ಬಯಸಲಿಲ್ಲ. ನಾವು ಸಹ ಅದೇ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಕೆಲವು ಸಲ ನಮ್ಮ ಮಾತುಗಳು ಕಠೋರ ಅನಿಸಿ, ಕೆಲವರಿಗೆ ಚುಚ್ಚಬಹುದು. ಆದರೆ, ಸತ್ಯ ಎಂದಾದರೂ ಸತ್ಯವೆ. ಮೊನ್ನೆ ಕೆಲವರು ನಾವಾಡಿದ ಮತುಗಳ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾತೆ ಮಹಾದೇವಿ, ಲಿಂಗಾನಂದ ಸ್ವಾಮಿಗಳನ್ನು ಅವಹೇಳನ ಮಾಡಿದ್ದೇವೆಂದು ಕೆಲವರು ಹೇಳುತ್ತಿದ್ದಾರೆ. ಅಂತಹವರಿಗೆ ನಮ್ಮ ಮಾತು ಅರ್ಥವಾಗಿಲ್ಲವೆಂದು ಕಾಣುತ್ತದೆ. ಮಾತೆ ಮಹಾದೇವಿಯವರು ಹಿರಿಯ ಗುರುಗಳ ಗರಡಿಯಲ್ಲಿ ಬೆಳೆದವರೆಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಅಂತಹವರನ್ನು ಪ್ರಚಾರಕ್ಕೆ ತಂದವರೇ ತರಳಬಾಳು ಶ್ರೀಗಳು. ಅದರ ಅರಿವಿಲ್ಲದ ಜನರು ಏನೇನೋ ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.ಅಭಿಯಾನಕ್ಕೆ ಅಣಬೇರು ರಾಜಣ್ಣ ಪ್ರೇರಕರಾಗಿ ಪ್ರೇರಣೆ ನೀಡಿದ್ದಾರೆ. ಅ.5ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಹ ಇದೇ ರೀತಿ ಯಶಸ್ವಿಯಾಗಲು ರಾಜಣ್ಣ ಸಹಿತ ಎಲ್ಲರೂ ಶ್ರಮಿಸಬೇಕು. ಅಭಿಯಾನ ಒಂದು ದಿನ, ತಿಂಗಳಿಗೆ ಮುಗಿಯುವುದಲ್ಲ ಎಂದರು.
ನಿಜಗುಣಾನಂದ ಸ್ವಾಮೀಜಿ, ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ, ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ಪಾಂಡೋಮಟ್ಟಿಯ ಡಾ.ಗುರುಬಸವ ಸ್ವಾಮೀಜಿ, ಕೂಡಲ ಸಂಗಮದ ಡಾ.ಗಂಗಾ ಮಾತಾಜಿ ಸೇರಿದಂತೆ ವಿವಿಧ ಲಿಂಗಾಯತ ಮಠಾಧಿಪತಿಗಳು, ಅಭಿಯಾನದ ಜಿಲ್ಲಾ ಅಧ್ಯಕ್ಷ ಅಣಬೇರು ರಾಜಣ್ಣ ಇತರರು ಇದ್ದರು. ಕಲಬುರಗಿ ಚಿಂತಕಿ ಕೆ.ನೀಲಾ ಉಪನ್ಯಾಸ ನೀಡಿದರು. ನಂತರ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಿತು.