ಕುವೆಂಪು ಕನ್ನಡದ ಕಂಪು ವಿಶ್ವಮಾನ್ಯವಾಗಿಸಲು ಪದಗಟ್ಟಿದರೆ, ಈ ಪದಗುಚ್ಛಗಳಿಗೆ ಮುತ್ತಿನ ಹಾರದಂತೆ ರಾಗ ಸಂಯೋಜನೆ ಮಾಡಿ ಸುಂದರ ಧ್ವನಿ ನೀಡಿದ ಸಿ ಅಶ್ವತ್ಥ್ ಸ್ಮರಣೆ ಸೂರ್ಯಚಂದ್ರ ಇರುವವರೆಗೆ ಶಾಶ್ವತವಾಗಿರಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವಿಶ್ವ ಮಾನವ ಸಂದೇಶ ಸಾರಿ ಕನ್ನಡದ ಸಿರಿವಂತಿಕೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಕುವೆಂಪು ಅವರ ಕನ್ನಡ ಸಾಹಿತ್ಯ, ಕಾವ್ಯ ಲೋಕಕ್ಕೆ ರಾಗದ ಭಾವ ತುಂಬಿದ ಮಾಂತ್ರಿಕ ನಾವಿಕ ಸಿ ಅಶ್ವತ್ಥ್ ಅವರ ಆದರ್ಶ ಬದುಕನ್ನು ಯುವ ಸಮುದಾಯ ತಿಳಿಯಬೇಕು ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ, ಸ್ಪಂದನಾ ಫೌಂಡೇಶನ್ ಹಮ್ಮಿಕೊಂಡಿದ್ದ ರಸಋಷಿ ಕುವೆಂಪು, ಸ್ವರ ಸಾಮಾರ್ಟ್ ಸಿ ಅಶ್ವತ್ಥ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ಕನ್ನಡದ ಕಂಪು ವಿಶ್ವಮಾನ್ಯವಾಗಿಸಲು ಪದಗಟ್ಟಿದರೆ, ಈ ಪದಗುಚ್ಛಗಳಿಗೆ ಮುತ್ತಿನ ಹಾರದಂತೆ ರಾಗ ಸಂಯೋಜನೆ ಮಾಡಿ ಸುಂದರ ಧ್ವನಿ ನೀಡಿದ ಸಿ ಅಶ್ವತ್ಥ್ ಸ್ಮರಣೆ ಸೂರ್ಯಚಂದ್ರ ಇರುವವರೆಗೆ ಶಾಶ್ವತವಾಗಿರಲಿದೆ ಎಂದರು.

ಮಾತೃ ಭಾಷೆಯಲ್ಲಿ ಗಟ್ಟಿತನ ಇದೆ ಎನ್ನುವುದಕ್ಕೆ ಕುವೆಂಪು ಮೊದಲು ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಲೋಕಕ್ಕೆ ಧುಮುಕಿದಾಗ ಇವರ ಗುರುಗಳ ಮಾರ್ಗದರ್ಶನದಿಂದ ಕನ್ನಡ ಭಾಷೆಯಲ್ಲಿ ತಮ್ಮ ಪ್ರೌಢಿಮೆಗೆ ಪಾದಾರ್ಪಣೆ ಮಾಡಿದರು. ಒಂದು ವೇಳೆ ಕುವೆಂಪು ಇಂಗ್ಲಿಷ್‌ನಲ್ಲಿ ತಮ್ಮ ಸಾಹಿತ್ಯಲೋಕದ ಪಯಣ ಸಾಗಿದ್ದರೆ ನಾವಿಂದು ಕನ್ನಡದ ಮೇರು ಸಾಹಿತಿ ಕಳೆದುಕೊಳ್ಳಬೇಕಿತ್ತು ಎಂದರು.

ಸ್ಪಂದನಾ ಫೌಂಡೇಶನ್ ಟ್ರಸ್ಟಿ ತ್ರಿವೇಣಿ ಮಾತನಾಡಿ, ಎಳೆಯ ಮನಸ್ಸಿನಲ್ಲಿ ಕುವೆಂಪು ಬದುಕಿನ ಆದರ್ಶ, ಸಾಹಿತ್ಯ, ಕಾವ್ಯದ ಬೀಜ ಬಿತ್ತಿದರೆ ಕನ್ನಡ ಭಾಷೆ ಸುಂದರವಾಗಿ ಮಕ್ಕಳಲ್ಲಿ ಮೂಡಲಿದೆ ಎಂದರು.

ಇದೇ ವೇಳೆ ಮಕ್ಕಳೊಂದಿಗೆ ಡಾ.ಕಿಕ್ಕೇರಿ ಕೃಷ್ಣಮೂರ್ತಿ ವಿವಿಧ ಗೀತೆಗಳನ್ನು ಹಾಡಿದರು. ಇದೇ ವೇಳೆ ಕುವೆಂಪು, ಸಿ. ಅಶ್ವಥ್ ಅವರಿಗೆ ಪುಷ್ಪನಮನ ಸಲ್ಲಿಸಿದರು. ಮಹೇಂದ್ರ, ಪಾಷ, ಕವಿತಾ ಭಾಗವಹಿಸಿದ್ದರು.