ಪ್ಯಾಕೇಜ್‌....ಸಿದ್ದು ಪರ ಸಾಹಿತಿ, ಕಲಾವಿದರಿಂದ ಪ್ರತಿಭಟನೆ

| Published : Aug 20 2024, 12:55 AM IST

ಪ್ಯಾಕೇಜ್‌....ಸಿದ್ದು ಪರ ಸಾಹಿತಿ, ಕಲಾವಿದರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಹಿತಿಗಳು, ಕಲಾವಿದರು ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಹಿತಿಗಳು, ಕಲಾವಿದರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯಪಾಲರು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ. ಬಿಜೆಪಿಯವರು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಮುಡಾ ಪ್ರಕರಣಕ್ಕೂ ಸಿದ್ದರಾಮಯ್ಯನವರಿಗೂ ನೇರ ಸಂಬಂಧವಿಲ್ಲ. ಸಿದ್ದರಾಮಯ್ಯ ಅವರ ಪತ್ನಿಯ ತಪ್ಪೂ ಇಲ್ಲ. ಮುಡಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ಮುಡಾದ ಆಯಕಟ್ಟಿನ ಜಾಗದಲ್ಲಿದ್ದ ಬಿಜೆಪಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರ ಬಗ್ಗೆ ತಪ್ಪು ಭಾವನೆ ಮೂಡಿಸಲು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನೇರವಾಗಿ ಬಹುಮತ ಪಡೆಯಲು ಸಾಧ್ಯವಾಗದ ಬಿಜೆಪಿಯವರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ತಪ್ಪು ಮಾಡಿದ್ದಾರೆ. ಸಂವಿಧಾನ ವಿರೋಧಿ ಕ್ರಮ ಅನುಸರಿಸಿದ್ದಾರೆ ಎಂದು ಟೀಕಿಸಿದರು.

ಗುಲಾಮಗಿರಿಯ ರಾಜ್ಯಪಾಲರು ತೊಲಗಲಿ:

ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು ಎಂಬ ಧೋರಣೆಯನ್ನು ಬಿಜೆಪಿ ಅನುಸರಿಸುತ್ತಿದೆ. ಈ ಧೋರಣೆಯಿಂದಾಗಿ ರಾಜಭವನ ಗುಲಾಮಗಿರಿಗೆ ತಳ್ಳಲ್ಪಟ್ಟಿದೆ. ಈ ರೀತಿಯ ಗುಲಾಮಿ ಪ್ರವೃತ್ತಿಯ ರಾಜ್ಯಪಾಲರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಬಾರದು. ಕೂಡಲೇ ರಾಜೀನಾಮೆ ನೀಡಿ ತೊಲಗಬೇಕು ಎಂದು ಆಗ್ರಹಿಸಿದರು.

ಸಾಹಿತಿಗಳಾದ ಡಾ.ಎಸ್‌.ಜಿ.ಸಿದ್ದರಾಮಯ್ಯ, ವದುಂಧರಾ ಭೂಪತಿ, ಚಿಂತಕರಾದ ಜಾಣಗೆರೆ ವೆಂಕಟರಾಮಯ್ಯ, ಇಂದಿರಮ್ಮ, ಅರವಿಂದ ಮಾಲಗತ್ತಿ, ಲೀಲಾ ಸಂಪಿಗೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.