ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲರಾಗಬೇಕು. ಸಾಹಿತ್ಯದ ವೈವಿಧ್ಯಮಯ ಕೃತಿಗಳ ಓದು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ.
ಗಂಗಾವತಿ: ಬದುಕಿನ ಪ್ರತಿ ಸಂಗತಿಯ ಕುರಿತು ಬರಹಗಾರ ಎಚ್ಚರವುಳ್ಳವನಾಗಿರಬೇಕು. ಬರಹ ಮನಸ್ಸು ಅರಳಿಸಬೇಕು, ಕೆರಳಿಸಬಾರದು. ಬರಹ, ಬದುಕಿನ ಸಾಮ್ಯತೆ ಇರಬೇಕು. ಸಮಾಜದ ಜತೆ ನಿರಂತರ ಮುಖಾಮುಖಿಯಾಗಬೇಕು. ಸಮಾಜದ ನೋವು ನಲಿವುಗಳಿಗೆ ಸ್ಪಂದಿಸದಿದ್ದರೆ ನಾವು ಜೀವಂತ ಶವಗಳಿದ್ಧಂತೆ. ಬರಹ ಮಾನವೀಯತೆಯ ಕುರಿತು ಸದಾ ಮಿಡಿಯುತಿರಬೇಕು. ಬರವಣಿಗೆ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕು ಎಂದು ಕವಿ ರಮೇಶ ಬನ್ನಿಕೊಪ್ಪ ಹೇಳಿದರು.
ಬುಧವಾರ ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂವಾದದಲ್ಲಿ ಮಾತನಾಡಿದರು.ರಮೇಶ ಬನ್ನಿಕೊಪ್ಪ ಅವರ ಒಲವಿನ ಪಿಸುಮಾತು ಕೃತಿಯ ಕುರಿತು ವಿದ್ಯಾರ್ಥಿನಿ ಪ್ರೇಮಾ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಚಾಲಕಿ ಡಾ. ಮುಮ್ತಾಜ್ ಬೇಗಂ ಮಾತನಾಡಿ ಕನ್ನಡದಲ್ಲಿ ಉತ್ತಮ ಕೃತಿಗಳ ಅಧ್ಯಯನ ಅತ್ಯಗತ್ಯ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲರಾಗಬೇಕು. ಸಾಹಿತ್ಯದ ವೈವಿಧ್ಯಮಯ ಕೃತಿಗಳ ಓದು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ವಿಭಾಗವು ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ ಹೊರತೆಗೆಯುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಕವಿಕಾವ್ಯ ಸಂವಾದದ ಸಂಚಾಲಕ ಗುಂಡೂರು ಪವನ್ ಕುಮಾರ್, ಪ್ರಾರ್ಥನೆ ಪವಿತ್ರ, ಸ್ವಾಗತ ಸುಧಾ, ವಂದನಾರ್ಪಣೆ ಭಾಗ್ಯ, ನಿರೂಪಣೆ ಶಾಂತಮ್ಮ ನೆರವೇರಿಸಿದರು.
