ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮುಖ್ಯಶಿಕ್ಷಕನಿಂದ ತಮಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಶಾಲಾ ಬಾಲಕಿಯರು ದೂರು ನೀಡಿದ್ದಾಗ್ಯೂ ಸಹ, ಪೋಕ್ಸೋ (ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಾಮ್ ಸೆಕ್ಷ್ಯುವಲ್ ಅಫೆನ್ಸೆನ್ಸ್ ಆ್ಯಕ್ಟ್) ಪ್ರಕರಣ ದಾಖಲಿಸಬೇಕಿದ್ದ ಪೊಲೀಸ್ ಇನ್ಸಪೆಕ್ಟರ್ ಒಬ್ಬರು, ರೇಪ್ ಆಗಿದ್ದರೆ ಮಾತ್ರ ಪೋಕ್ಸೋ ದಾಖಲಿಸಲಾಗುತ್ತದೆ ಸರ್ ಎಂದು ಮೇಲಿನಂತಹ ಉತ್ತರ ನೀಡುವ ಮೂಲಕ, ಆಘಾತ ಮೂಡಿಸಿದ್ದರು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದರು.ಗುರುಮಠಕಲ್ ತಾಲೂಕಿನ ಅನಪುರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಣಮೇಗೌಡ ಕಳೆದ 2-3 ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ದೂರಿದ್ದ ಶಾಲಾ ಬಾಲಕಿಯರು, ವಿಚಾರಣೆಗೆ ಹೋಗಿದ್ದ ತಹಸೀಲ್ದಾರರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೆದುರು ಕಣ್ಣೀರಿಟ್ಟಿದ್ದರು. ಸುಮಾರು 30ಕ್ಕೂ ಹೆಚ್ಚು ಬಾಲಕಿಯರು ಅಲ್ಲಿನ ದೌರ್ಜನ್ಯದ ಭೀಕರತೆಯನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿ, ಅಳಲು ತೋಡಿಕೊಂಡಿದರು.
ಇದೇ ಆಧಾರದ ಮೇಲೆ ಶಿಕ್ಷಣ ಇಲಾಖೆ ವರದಿ ನೀಡಿತ್ತಾದರೂ, ಅನುಚಿತ ವರ್ತನೆ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಆರಂಭದಲ್ಲೇ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಹಿಂದೇಟು ಹಾಕಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕಂದಕೂರು, ಪೋಕ್ಸೋ ಯಾಕೆ ಹಾಕಿಲ್ಲ ಎಂದು ಇನ್ಸಪೆಕ್ಟರ್‌ರನ್ನು ಕೇಳಿದರೆ, ರೇಪ್ ಆಗಿದ್ದರೆ ಮಾತ್ರ ಪೋಕ್ಸೋ ಕಾಯ್ದೆ ಬರುತ್ತದೆ ಸರ್ ಎಂದು ಉತ್ತರಿಸಿದ್ದರು. ಕಾನೂನು ತಿಳಿಯದ ಅಧಿಕಾರಿ ಜನರನ್ನು ಹೇಗೆ ರಕ್ಷಿಸಿಯಾನು ಎಂದು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು.ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ, ಸಿಇಓರಂತಹ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ. ಇಂತಹ ಪ್ರಕರಣಗಳ ಸೂಕ್ಷ್ಮತೆ ಬಗ್ಗೆ ಅರಿಯಬೇಕಾದ ಇವರೇ, ಮಹಿಳೆಯರು ಮತ್ತು ಮಕ್ಕಳ ಮೇಲೆ ಇಂತಹ ದೌರ್ಜನ್ಯ ನಡೆದಾಗ ಗಂಭೀರತೆ ತೋರದಿರುವುದು ದುರದೃಷ್ಟಕರ. ಪೋಕ್ಸೋ ಕಾಯ್ದಯಡಿ ಪ್ರಕರಣ ದಾಖಲಿಸದಿರುವ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ಮಾತನಾಡಿ, ಮನವರಿಕೆ ಮಾಡಿದಾಗ ತಡರಾತ್ರಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಯಾರದ್ದೋ ಒತ್ತಡಕ್ಕೆ ಮಣಿದು ಕೇವಲ ಅಮಾನತು ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದು ಘೋರ ಅಪರಾಧ ಎಂದು ಕಿಡಿ ಕಾರಿದರು.
ಇದಕ್ಕೆ ಸಮಜಾಯಿಷಿ ನೀಡಲು ಬಂದ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರು, ಮಕ್ಕಳ ರಕ್ಷಣೆ ಬಗ್ಗೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅನಪುರ ಘಟನೆ ಕುರಿತು ಶಾಸಕ ಕಂದಕೂರು ಸಭೆಯಲ್ಲಿ ಮಾತನಾಡುತ್ತ ಭಾವೋದ್ವೇಗಕ್ಕೆ ಒಳಗಾದರು. ಒಂದು ಕ್ಷಣ, ಇಡೀ ಸಭೆ ಸ್ತಬ್ಧವಾಯಿತು.ಶಾಸಕ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ, ಸದರಿ ಇನ್ಸಪೆಕ್ಟರ್‌ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಹೆಚ್ಚುವರಿ ಎಸ್ಪಿ ಧರಣೇಶ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸೂಚಿಸಿದರು. ಜಿಲ್ಲಾ ಕಾರ್ಯದರ್ಶಿ ಮನೋಜ್ ಜೈನ್ ಇಂತಹ ಪ್ರಕರಣಗಳ ಸೂಕ್ಷ್ಮತೆ ಅರಿಯದಿದ್ದರೆ ಮಕ್ಕಳ ಗತಿಯೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
;Resize=(128,128))
;Resize=(128,128))
;Resize=(128,128))
;Resize=(128,128))