ಯಾದಗಿರಿ: ಕೃಷ್ಣೆ ಆಯ್ತು, ಈಗ ಭೀಮೆಯರ್ಭಟ..!

| Published : Aug 07 2024, 01:04 AM IST

ಸಾರಾಂಶ

ಕಳೆದ ಹದಿನೈದು ದಿನಗಳ ಹಿಂದಷ್ಟೇ ಕೃಷ್ಣಾ ನದಿ ಪಾತ್ರದಲ್ಲಿ ಕಂಡಿದ್ದ ಪ್ರವಾಹದ ಆತಂಕ ಈ ಕಳೆದೆರಡು ದಿನಗಳಿಂದ ತಗ್ಗಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ, ಮಹಾರಾಷ್ಟ್ರದಲ್ಲಿ ನಿಲ್ಲದ ಮಳೆಯಿಂದಾಗಿ ಭೀಮಾ ಪಾತ್ರದಲ್ಲೀ ನೆರೆ ಭೀತಿ ಕಾಣಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಳೆದ ಹದಿನೈದು ದಿನಗಳ ಹಿಂದಷ್ಟೇ ಕೃಷ್ಣಾ ನದಿ ಪಾತ್ರದಲ್ಲಿ ಕಂಡಿದ್ದ ಪ್ರವಾಹದ ಆತಂಕ ಈ ಕಳೆದೆರಡು ದಿನಗಳಿಂದ ತಗ್ಗಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ, ಮಹಾರಾಷ್ಟ್ರದಲ್ಲಿ ನಿಲ್ಲದ ಮಳೆಯಿಂದಾಗಿ ಭೀಮಾ ಪಾತ್ರದಲ್ಲೀ ನೆರೆ ಭೀತಿ ಕಾಣಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ರಾಜ್ಯದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿತ್ತು. ಇದರಿಂದಾಗಿ ಆಲಮಟ್ಟಿಗೆ ಸಮಾನಾಂತರವಾದ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಬಸವ ಸಾಗರ ಜಲಾಶಯದ ನೀರಿನ ಮಟ್ಟ ಕಾಯ್ದಿಟ್ಟುಕೊಂಡು, ಹಂತ ಹಂತವಾಗಿ ಕಳೆದ 15 ದಿನಗಳಿಂದ ಸುಮಾರು 3.50 ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿತ್ತು.

ಇದರರ್ಭಟಕ್ಕೆ ಜಿಲ್ಲೆಯ ಕೃಷ್ಣಾ ನದಿಪಾತ್ರದ 45 ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿತ್ತಲ್ಲದೆ, ಹತ್ತಾರು ದಿನಗಳವರೆಗೆ ರಸ್ತೆ -ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಂಡಿತ್ತು. ಸಾವಿರಾರು ಎಕರೆ ಪ್ರದೇಶಗಳಲ್ಲಿನ ಹೊಲಗದ್ದೆಗಳಲ್ಲಿನ ನೀರು ನುಗ್ಗಿ ಬೆಳೆಗಳು ಹಾಳಾಗಿದ್ದವು. ಆದರೆ, ಕಳೆದೆರಡು ದಿನಗಳಿಂದ ಬಸವ ಸಾಗರ ಜಲಾಶಯದಿಂದ ನೀರಿನ ಹೊರಹರಿವು (1.90 ಲಕ್ಷ ಕ್ಯೂಸೆಕ್‌) ಕಮ್ಮಿಯಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಎದುರಾಗಲಿದ್ದ ಸಂಕಷ್ಟ ತಪ್ಪಿತು ಎಂದು ಜನ ಹಾಗೂ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿತ್ತು.

ಇದರ ಬೆನ್ನಲ್ಲೇ, ಈಗ ಭೀಮಾ ಪ್ರವಾಹ ಮತ್ತೇ ಆತಂಕ ಮೂಡಿಸಿದೆ. ಮಹಾ ಮಳೆಯಿಂದಾಗಿ ಉಜ್ಜನಿ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಇದು ಭೀಮಾ ಪ್ರವಾಹಕ್ಕೆ ಕಾರಣವಾಗುವ ಭೀತಿ ಎದುರಾಗಿದೆ. ಕಲಬುರಗಿ ಜಿಲ್ಲೆಯ ಸೊನ್ನ ಮೂಲಕ ಭೀಮಾ ಪ್ರವಾಹ ಯಾದಗಿರಿ ಜಿಲ್ಲೆಗೂ ಕಾಡಲಿದೆ ಎನ್ನಲಾಗಿದೆ.

ಯಾದಗಿರಿಗೆ ಸಮೀಪದ ಗುರುಸುಣಗಿ ಗ್ರಾಮದ ಭೀಮಾ ಬ್ರಿಡ್ಜ್‌ ಕಂ ಬ್ಯಾರೇಜಿನಿಂದ 25 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಉಜ್ಜನಿಯಿಂದ ಹೆಚ್ಚಿನ ನೀರು ಇಲ್ಲೂ ಹೊರಹರಿವು ಹೆಚ್ಚುವ ಸಾಧ್ಯತೆಯಿದೆ. ನದಿಪಾತ್ರದಲ್ಲಿ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ನದಿ ದಡದಲ್ಲಿರುವ ವೀರಾಂಜನೇಯ ಸ್ವಾಮಿ ಹಾಗೂ ಕಂಗಳೇಶ್ವರ ದೇವಸ್ಥಾನಗಳು ಮುಳುಗಿದ್ದು, ಗುಡಿ ಗೋಪುರದ ಮೇಲಿನ ಧ್ವಜ ಮಾತ್ರ ಕಾಣುತ್ತಿದೆ. ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ, ನದಿಗಿಳಿಯದಂತೆ ಎಚ್ಚರಿ ಕೆ ನೀಡಲಾಗಿದೆ. ಹುರಸಗುಂಡಗಿ ಹಾಗೂ ಸಂಬಂಧಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಭೇಟಿ ನೀಡಿ ಬಂದಿದ್ದಾರೆ. ಹೊರಹರಿವು ಹೆಚ್ಚಾದರೆ ನದಿ ಸಮೀಪದ ಹೊಲಗದ್ದೆಗಳಿಗೆ ನೀರು ನುಗ್ಗಿ, ಬೆಳೆಹಾನಿ ಸಂಭವವಿದೆ.

ಯಾದಗಿರಿ, ಶಹಾಪುರ ಹಾಗೂ ವಡಗೇರಾ ತಾಲೂಕುಗಳ 35 ಭೀಮಾನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪೂರ್ವ ಸಿದ್ಧತೆಗಳ ನಡೆಸಿದ ಜಿಲ್ಲಾಡಳಿತ, ಇದಕ್ಕೆಂದು ನೋಡಲ್‌ ಅಧಿಕಾರಿಗಳ ನೇಮಿಸಿ, ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. ಹುರಸಗುಂಡಗಿ, ಶಿರವಾಳ, ರೋಜಾ (ಎಸ್‌), ಅಣಿ, ಬಿದರಾಣಿ, ಚಟ್ನಳ್ಳಿ, ಮಲ್ಹಾರ್‌, ಲಿಂಗೇರಿ, ಕೌಳೂರು, ಹಾಲಗೇರಾ, ಗೋಡಿಹಾಳ್‌, ಕಂದಳ್ಳಿ, ಕುಮನೂರು, ಶಿವನೂರು, ಜೋಳದಡಗಿ, ಕೊಂಗಂಡಿ, ಮಾಚನೂರು ಮುಂತಾದ ಕಡೆಗಳಲ್ಲಿ ಭೀಮಾತಂಕ ಎದುರಾಗಿದೆ.