ವಂದೇ ಭಾರತ್‌ ರೈಲಿಗೆ ಯಾದಗಿರಿ ಜನರ ಒಕ್ಕೊರಲ ದನಿ

| Published : Mar 11 2024, 01:19 AM IST

ಸಾರಾಂಶ

ವಂದೇ ಭಾರತ್‌ ನಿಲುಗಡೆಗೆ ಆಗ್ರಹಿಸಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ್‌, ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಅವರು ಕೇಂದ್ರ ರೈಲ್ವೆ ಮಂತ್ರಿಗಳಿಗೆ ಪತ್ರ ಬರದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಂಗಳವಾರ ಮಾ.12ರಿಂದ ಆರಂಭವಾಗಲಿರುವ, ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಸೇರಿದಂತೆ, ಈ ಮಾರ್ಗವಾಗಿ ವಿವಿಧೆಡೆ ಸಂಚರಿಸುವ ಪ್ರಮುಖ ರೈಲುಗಳನ್ನು ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಒಕ್ಕೂರಲ ದನಿ ಇದೀಗ ಹೋರಾಟದ ಹಾದಿಗಿಳಿದಿದೆ.

ಕಲಬುರಗಿ-ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್‌ ರೈಲು ಯಾದಗಿರಿಗೆ ನಿಲುಗಡೆ ಮಾಡಲು ತಕ್ಷಣ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ರೈಲು ನಿಲ್ದಾಣಕ್ಕೆ ನುಗ್ಗುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ಎಚ್ಚರಿಸಿದ್ದಾರೆ. ರೈಲು ನಿಲ್ದಾಣದ ವ್ಯವಸ್ಥಾಪಕರ ಮೂಲಕ ಅವರು ಮನವಿ ಸಲ್ಲಿಸಿದ್ದಾರೆ.

ವಂದೇ ಭಾರತ್‌ ರೈಲು ನಿಲ್ಲಿಸಿದರೆ ಜನರಿಗೆ ಬಹಳ ಅನುಕೂಲ ಆಗುತ್ತದೆ. ಒಂದು ವೇಳೆ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸದೆ ಹೋದರೆ, ಕರವೇ ಜಿಲ್ಲಾ ಘಟಕದ ವತಿಯಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ವಿಶ್ವರಾಜ ಹೊನಿಗೇರಾ, ಸಾಹೇಬಗೌಡ, ಅಂಬ್ರೆಶ್ ಹತ್ತಿಮನಿ ಎಚ್ಚರಿಸಿದ್ದಾರೆ.

ಈ ಮಧ್ಯೆ, ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ್‌ ಅವರು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್‌ ಜಾಧವ ಅವರಿಗೆ ಪತ್ರ ಬರೆದು, ಯಾದಗಿರಿಯಲ್ಲಿ ವಂದೇ ಭಾರತ್‌ (22231/22232) ನಿಲುಗಡೆ ಕೋರಿದ್ದಾರೆ. ಇದನ್ನು ಉಲ್ಲೇಖಿಸಿ, ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದಿರುವ ಸಂಸದ ಡಾ. ಉಮೇಶ ಜಾಧವ್‌, ವಂದೇಭಾರತ್‌ ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ ವಿಶೇಷ ರೈಲನ್ನು ಒದಗಿಸಿರುವುದು ಸ್ವಾಗತಾರ್ಹ.

ಸ್ವಾತಂತ್ರ್ಯಾನಂತರದ 76 ವರ್ಷಗಳಲ್ಲಿ ಇದು ಈ ಭಾಗದಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗುರುಮಠಕಲ್‌ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಅವರು ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್‌ ನಿಲುಗಡೆಗೆ ಕೋರಿದ್ದು, ಮಹತ್ವಾಕಾಂಕ್ಷಿ ಜಿಲ್ಲೆಯಲ್ಲೊಂದಾದ ಇಲ್ಲಿದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ವಂದೇ ಭಾರತ್‌ ರೈಲು ಸೇರಿದಂತೆ ಪ್ರಮುಖ ರೈಲುಗಳು ಯಾದಗಿರಿ ನಿಲ್ದಾಣದಲ್ಲಿ ನಿಲ್ಲದಿರುವುದು ಖಂಡನೀಯ, ಗುಂತಕಲ್‌ ವಿಭಾಗದಲ್ಲಿ ಅತಿ ಹೆಚ್ಚು ಆದಾಯ ನೀಡುವ ಇಲ್ಲಿಗೆ ಮಹತ್ವದ ರೈಲುಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕರ ಕೂಗುಗಳು ಕೇಳಿ ಬರುತ್ತಿವೆ.

ಕನ್ನಡಪ್ರಭ ಫೋನ್‌ ಇನ್‌ ನೇರ ಕಾರ್ಯಕ್ರಮ ಇಂದು

ಯಾದಗಿರಿಗೆ ರೈಲ್ವೆ ಸೌಕರ್ಯಗಳು ಹಾಗೂ ಪ್ರಮುಖ ರೈಲುಗಳ ನಿಲುಗಡೆ ಕುರಿತು ಜನ ಹಾಗೂ ಕನ್ನಡಪರ ಹೋರಾಟ ಸಂಘಟನೆಗಳು ಸಮಾಜಮುಖಿ ಮನಸ್ಕರ ಚರ್ಚೆಯ ನೇರ ಫೋನ್‌ ಕಾರ್ಯಕ್ರಮ ಮಾ.11ರ ಸೋಮವಾರ ನಡೆಯಲಿದೆ. ವಿವಿಧ ರೈಲ್ವೆ ಪರ ಕಾಳಜಿಯುಳ್ಳ ಪ್ರಮುಖರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲಿದ್ದಾರೆ. ಸೋಮವಾರ (ಮಾ.11) ಬೆಳಿಗ್ಗೆ 11 ಗಂಟೆಯಿಂದ ಫೇಸ್ಬುಕ್‌ ಲೈವ್‌ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಮೊಬೈಲ್‌ ಸಂಖ್ಯೆ 7204601197ಗೆ ಕರೆ ಮಾಡಬಹುದು. facebook/kannadaprabha.yadgir ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು.