ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತ ಮುಖ್ಯೋಪಾಧ್ಯಾಯ ವಿರುದ್ಧ ಮೊದಲು ಪೋಕ್ಸೋ ಕಾಯ್ದೆಯಡಿ ಪ್ರಕರಣ ಏಕೆ ದಾಖಲಿಸಿಲ್ಲ ಎಂದು ಕೇಳಿದ್ದ ಶಾಸಕರಿಗೆ, ರೇಪ್ ಆಗಿರಲಿಲ್ಲ ಎಂದುತ್ತರಿಸಿದ್ದ ಇನ್ಸಪೆಕ್ಟರ್ ಸೇರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಬಿಇಓ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಜ.23ರಂದು ಬೆಂಗಳೂರಿನಲ್ಲಿ ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.ಜ.18ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ ಉಲ್ಲೇಖಿಸಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅವರು, ಸ್ವಯಂ ದೂರು ದಾಖಲಿಸಿಕೊಂಡು, ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ, ಗುರುಮಠಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗುರುಮಠಕಲ್ ಠಾಣಾಧಿಕಾರಿಗಳಿಗೆ ಸಮನ್ಸ್ ನೀಡಿದ್ದಾರೆ.
ಈ ಪ್ರಕರಣವನ್ನು ಆಯೋಗವು ಬಹು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಹಿತರಕ್ಷಣಾ ದೃಷ್ಟಿಯಿಂದ ಈ ಪ್ರಕರಣದಲ್ಲಿ ವಿಚಾರಣೆಯ ಅಗತ್ಯತೆ ಆಯೋಗಕ್ಕೆ ಕಂಡುಬಂದ ಹಿನ್ನೆಲೆ ಜ.23ಬೆಳಗ್ಗೆ10.30ಕ್ಕೆ ದೂರಿನ ವಿಚಾರಣೆ ನಿಗದಿಪಡಿಸಿದೆ.ಈ ದೂರಿಗೆ ಸಂಬಂಧಪಟ್ಟ ಹೇಳಿಕೆಯನ್ನು ಲಿಖಿತವಾಗಿ ಹಾಗೂ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು *(Statement of Objection with two Copies & Documents)* ವಿಚಾರಣಾ ಸಮಯದಲ್ಲಿ ಸಲ್ಲಿಸುವುದು ಹಾಗೂ ಖುದ್ದಾಗಿ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಚೇರಿಗೆ ಹಾಜರಾಗುವಂತೆ ಸೆಕ್ಷನ್ 14(1) (ಎ) ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯ್ದೆ 2005 ರಡಿ ಸಮನ್ಸ್ ಜಾರಿ ಮಾಡಲಾಗಿದೆ.
ಏನಿದು ಪ್ರಕರಣ?ಬುಧವಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಇಂತಹುದ್ದೊಂದು ವಿಷಯ ಪ್ರಸ್ತಾಪಿಸಿದ್ದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಈ ಪ್ರಕರಣದ ಬಗ್ಗೆ ಇನ್ಸ್‌ಪೆಕ್ಟರ್ ಹೇಳಿಕೆ ಅಸಹ್ಯ ಮೂಡಿಸಿತ್ತು ಎಂದು ಕಿಡಿ ಕಾರಿದ್ದರು. ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಪಂ ಸಿಇಓ ಅಂತಹ ಮಹತ್ವದ ಹುದ್ದೆಗಳಲ್ಲಿ ಮಹಿಳೆಯರೇ ಇರುವಾಗ, ಇಂತಹ ಘಟನೆ ಅಮಾನವೀಯ ಹಾಗೂ ತಲೆತಗ್ಗಿಸುವಂತಹುದ್ದು. ನಮ್ಮ ನಿಮ್ಮ ಮನೆಯ ಮಕ್ಕಳಿಗೆ ಇಂತಹ ದುಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದೀರಿ ಎಂದು ಕೇಳಿದ ಶಾಸಕ ಕಂದಕೂರು, ಈ ವಿಚಾರದಲ್ಲಿ ಆರೋಪಿಯನ್ನು ಪ್ರಭಾವಿಗಳ ಒತ್ತಡದ ಮೇರೆಗೆ ಅಧಿಕಾರಿಗಳೇ ರಕ್ಷಿಸಲು ಮುಂದಾಗಿದ್ದುದು ಬೇಸರ ಮೂಡಿಸಿದೆ ಎಂದು ದೂರಿದ್ದರು. ಮಹತ್ವದ ಕೆಡಿಪಿ ಸಭೆಯಲ್ಲಿ ಶಾಸಕರ ಇಂತಹ ಹೇಳಿಕೆ ಕುರಿತು ಜ.18 ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು.