ಯಾದಗಿರಿ: ಪಿಎಸ್‌ಐ ಅನುಮಾನಾಸ್ಪದ ಸಾವು

| Published : Aug 05 2024, 12:31 AM IST

ಸಾರಾಂಶ

ವರ್ಗಾವಣೆ ಖಿನ್ನತೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಯಾದಗಿರಿ ನಗರ ಠಾಣೆಯ ಪಿಎಸೈ ಪರಶುರಾಮ್‌ ತಮಗಾಗಿದ್ದ ನೋವು, ಹಣದ ವ್ಯವಹಾರ ಕುರಿತು ಆಪ್ತವಲಯದಲ್ಲಿ ತೋಡಿಕೊಂಡಿರಬಹುದು ಎಂಬ ಸಂಶಯದಿಂದ, ಅವರ ಮೊಬೈಲ್‌ ಕಾಲ್‌ ರಿಕಾರ್ಡಿಂಗ್‌ ಮತ್ತು ಕರೆಗಳನ್ನು ಪರಿಶೀಲಿಸಲು ಸಿಐಡಿ ತಂಡ ಮುಂದಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಾವಿಗೂ ಮುನ್ನ ಅವರು ಯಾರ್ಯಾರ ಜೊತೆ ಮಾತನಾಡಿದ್ದರು ಎಂಬುದು ಸೇರಿದಂತೆ, ಕಳೆದ ಹತ್ತಾರು ದಿನಗಳ ಕರೆಗಳು - ಕಾಲ್‌ ರಿಕಾರ್ಡಿಂಗ್ಸ್‌ "ಗಳ ದಾಖಲೆ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಜತೆಗೆ, ಅವರು ಆಪ್ತರಲ್ಲಿ ವರ್ಗಾವಣೆ ಕುರಿತು ಪ್ರಸ್ತಾಪಿಸಿರುವುದನ್ನು ಕೆಲವು ಸಂಘಟನೆಗಳು ಬಹಿರಂಗಪಡಿಸಲಿವೆ ಎನ್ನಲಾಗುತ್ತಿದೆ.

ಒಂದು ವೇಳೆ ಕಾಲ್‌ ರೆಕಾರ್ಡಿಂಗ್ಸ್‌ ಪರಿಶೀಲನೆ ನಡೆದು, ವರ್ಗಾವಣೆ ದಂಧೆಯ ಅಸಲಿ ಮುಖಗವಸು ಬಹಿರಂಗವಾದರೆ ಕೆಲವು ಪ್ರಭಾವಿ ರಾಜಕಾರಣಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ತಲೆದಂಡವಾಗಲಿದೆ.

ಪರಶುರಾಮ್‌ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಡಿವೈಎಸ್ಪಿ ಪುನೀತ್‌ ನೇತೃತ್ವದ ಅಧಿಕಾರಿಗಳ ತಂಡ ಸುಮಾರು 18 ಗಂಟೆಗೊಳಗಾಗಿ ಯಾದಗಿರಿಗೆ ಭಾನುವಾರ ಬೆಳ್ಳಂಬೆಳಿಗ್ಗೆಯೇ ಆಗಮಿಸಿ, ಇಲ್ಲಿನ ಡಿವೈಎಸ್ಪಿ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಂಡಿದೆ.

ಪೆನ್‌ಡ್ರೈವ್‌ ಸೇರಿದಂತೆ ಹಲವು ಕಡತದ ಬ್ಯಾಗ್‌ ಅನ್ನು ಸಿಐಡಿ ತಮ್ಮ ವಶಕ್ಕೆ ಪಡೆದಿದೆ. ಸೋಮವಾರ ಪರಶುರಾಮ್‌ ಅವರ ತಂದೆ ಹಾಗೂ ಮಾವ ಸೇರಿದಂತೆ ಹಲವರು ಡಿವೈಎಸ್ಪಿ ಪುನೀತ್‌ ಭೇಟಿ ಮಾಡಿ, ಘಟನೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂಬ ಮಾತುಗಳಿವೆ. ಇತ್ತ ಶಾಸಕ ಹಾಗೂ ಪುತ್ರನ ಬಂಧನ ಮಾಡಿ ಪ್ರಾಮಾಣಿಕ ತನಿಖೆಗೆ ನಡೆಸಲು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳು ಅಗ್ರಹಿಸಿವೆ.