ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ ಸುಮಾರು ₹2 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ತನಿಖೆಗಿಳಿದ ಅಧಿಕಾರಿಗಳ ಅನುಮಾನಾಸ್ಪದ ನಡೆಗಳು ಹಾಗೂ ಅವರ ವಿರುದ್ಧದ ಆರೋಪಗಳಿಂದಾಗಿ ನೈಜತನಿಖೆ ಸಾಧ್ಯವೇ ಎಂಬ ಅನುಮಾನದ ಪ್ರಶ್ನೆಗಳು ಎದ್ದಿದ್ದವು. ಇದರ ಬೆನ್ನಲ್ಲೇ, ಸುರಪುರದಲ್ಲೂ 20234 ಫೆಬ್ರವರಿಯಲ್ಲಿ ಸುಮಾರು 2300 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ತನಿಖೆ ಹಳ್ಳಹಿಡಿಯಿತೇ?ಇಂಥದ್ದೊಂದು ಪ್ರಶ್ನೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಶಹಾಪುರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು ಪರಿಶೀಲಿಸುವಾಗ, ಸುಮಾರು 6 ಸಾವಿರ ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ದಾಸ್ತಾನು ನಾಪತ್ತೆ ಆಗಿರುವುದು 6 ತಿಂಗಳ ನಂತರ ಕಂಡುಬಂದಿದೆ ಎಂದು ಅಧಿಕಾರಿಗಳು 2023ರ ನವೆಂಬರ್ 25ರಂದು ದೂರು ದಾಖಲಿಸಿದ್ದರು.
ಅದೇ ತೆರನಾಗಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಯಮಿತದಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸುರಪುರದ ಗೋದಾಮಿನಲ್ಲಿ ಜೂನ್ 1, 2022 ರಿಂದ ಫೆ.23, 2023ರವರೆಗಿನ 9 ತಿಂಗಳ ಅವಧಿಯಲ್ಲಿ 2363 ಕ್ವಿಂಟಲ್ ಪಡಿತರ ಅಕ್ಕಿ ಕೊರತೆ ಕಂಡುಬಂದಿದೆ ಎಂದು ಸುರಪುರ ಪೊಲೀಸ್ ಠಾಣೆಯಲ್ಲಿ ಫೆ.25, 2023ರಂದು ದೂರು ದಾಖಲಾಗಿತ್ತು (ಪ್ರಕರಣ ಸಂಖ್ಯೆ:0025/2023).ವಿಚಾರಣೆ ನಡೆಸಿದ್ದ ಆಹಾರ ಇಲಾಖೆ ಅಲ್ಲಿನ ಸಿಬ್ಬಂದಿಯನ್ನು ಅಮಾನತು ಮಾಡಿತ್ತು. ಈ ಪ್ರಕರಣದಲ್ಲಿ, ₹3.14 ಲಕ್ಷ ಮೌಲ್ಯದ ಆಹಾರ ಧಾನ್ಯಗಳು ಹಾಗೂ ₹2.29 ಲಕ್ಷ ನಗದು ಹಣ ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ, ಇನ್ನುಳಿದ ₹80 ಲಕ್ಷಗಳಿಗೂ ಮಿಕ್ಕಿದ ಸಾವಿರಾರು ಕ್ವಿಂಟಲ್‌ನಷ್ಟು ಆಹಾರ ಧಾನ್ಯಗಳು ಎಲ್ಲಿವೆ ಎಂದು ಮಾಹಿತಿ ಇದ್ದರೂ, ಮೂಲಕಳ್ಳರ ಪತ್ತೆಗೆ ಪೊಲೀಸರು ಅದೇಕೆ ಮುಂದಾಗಲಿಲ್ಲ ಎಂಬುದು ಜನರ ಪ್ರಶ್ನೆ.
ಕಾಟಾಚಾರದ ತನಿಖೆಗಳು: ಸರ್ಕಾರ ಬಡವರಿಗೆಂದು ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆ ಮೂಲಕ ಖರೀದಿಸಿ, ಯಾದಗಿರಿ ಜಿಲ್ಲೆಯಿಂದ ತೆಲಂಗಾಣ, ಗುಜರಾತ್ ಹಾಗೂ ಮಹಾರಾಷ್ಟ್ರಕ್ಕೆ ಸಾಗಿಸಲಾಗುವ ಅಕ್ರಮಗಳ ಬಗ್ಗೆ ನಡೆಯುವ ತನಿಖೆಗಳು ಕೇವಲ ಕಾಟಾಚಾರಕ್ಕೆಂಬಂತೆ ನಡೆಯುತ್ತವೆ. ದಂಧೆಕೋರರ ಜೊತೆ ಅಧಿಕಾರಿಗಳೇ ಶಾಮೀಲಾಗಿರುವುದರಿಂದ, ಇಂತಹ ಅಕ್ರಮಗಳ ಬಗ್ಗೆ ಆಳವಾದ ತನಿಖೆ ನಡೆಸದೇ ಎಲ್ಲವನ್ನೂ ಮರೆ ಮಾಚಲಾಗುತ್ತದೆ ಎಂಬ ಆರೋಪಗಳಿವೆ. ಸರ್ಕಾರಿ ಪಡಿತರ ಅಕ್ಕಿ ಅಕ್ರಮ ಮಾರಾಟ ಜಾಲದ ವಿರುದ್ಧ ದೂರುಗಳೇನೋ ದಾಖಲಿಸಲಾಗುತ್ತದೆ. ಆದರೆ, ತನಿಖೆ ಹಳ್ಳ ಹಿಡಿಯುತ್ತದೆ. ಅಕ್ಕಿ ಅಕ್ರಮ ಪ್ರಕರಣಗಳು:- 2020 ಅಕ್ಟೋಬರ್ 30: ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಗುರುಮಠಕಲ್ ಮೂಲಕ ಗುಜರಾತಿಗೆ ಸಾಗಿಸುತ್ತಿದ್ದ ವೇಳೆ, ಬೀದರ್ ಜಿಲ್ಲೆ ಬಸವಕಲ್ಯಾಣದ ಸಸ್ತಾಪುರ ಚಾಂಗ್ಲಾ ಬಳಿಯ ಹೈದರಾಬಾದ್- ಮುಂಬೈ ರಾಷ್ಟ್ರೀಯ ಹೆದ್ದಾರಿ -65 ರಲ್ಲಿ 4 ಲಾರಿಗಳ ತಡೆದಿದ್ದ ಪೊಲೀಸರು, 8 ಜನರನ್ನು ಬಂಧಿಸಿ, ₹36 ಲಕ್ಷ ಮೌಲ್ಯದ 120 ಟನ್ ಅಕ್ಕಿ ಜಪ್ತಿ ಮಾಡಿದ್ದರು.
- 2021 ಅಕ್ಟೋಬರ್ 13: ಶಹಾಪುರ ತಾಲೂಕು ಗೋಗಿಯಿಂದ ಕಲಬುರಗಿ ಜಿಲ್ಲೆ ಜೇವರ್ಗಿಯ ಚಿಗರಳ್ಳಿ ಕ್ರಾಸ್ ಮಾರ್ಗವಾಗಿ ಮಹಾರಾಷ್ಟ್ರ ಕಡೆಗೆ ಸಾಗುತ್ತಿದ್ದ ಲಾರಿ ತಡೆದು, ಅದರಲ್ಲಿದ್ದ 260 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಲಾಗಿತ್ತು.- 2021 ನವೆಂಬರ್ 26: ಶಹಾಪುರ ತಾಲೂಕು ಭೀಮರಾಯನ ಗುಡಿ- ಶಖಾಪುರ ಕ್ರಾಸ್ ಮಧ್ಯೆ ಲಾರಿ ತಡೆದು ₹21.62 ಲಕ್ಷ ಮೌಲ್ಯದ 983 ಕ್ವಿಂಟಲ್‌ನಷ್ಟು 1966 ಚೀಲಗಳ ಪಡಿತರ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣಕ್ಕೆ ಕಡೆಗಳಲ್ಲಿ ಇವನ್ನು ಸಾಗಿಸಲಾಗುತ್ತಿತ್ತು.
- 2022, ಫೆಬ್ರವರಿ 12: ಶಹಾಪುರ ತಾಲೂಕು ಗೋಗಿ ಬಳಿ ₹8.36 ಲಕ್ಷಗಳ ಮೌಲ್ಯದ 760 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ದಾಸ್ತಾನನ್ನು ಜಪ್ತಿ ಮಾಡಿಕೊಳ್ಳಲಾಯಿತು. ಗೋಗಿಯಿಂದ ರಾಜಸ್ಥಾನಕ್ಕೆ ಇದನ್ನು ಸಾಗಿಸತ್ಗುತ್ತಿತ್ತು ಎನ್ನಲಾಗಿದೆ.- 2021 ಜುಲೈ 20: ಶಹಾಪುರ ತಾಲೂಕು ಚಾಮನಾಳ್ ಕ್ರಾಸ್ ಹತ್ತಿರ 510 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ 50 ಕೆ.ಜಿ. ತೂಕದ ₹3.82 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಲಾಗಿತ್ತು. ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
- 2023 ಮೇ 31ರಂದು ಶಹಾಪುರ ಟಿಎಪಿಸಿಎಂಎಸ್ ಆವರಣದಲ್ಲಿ ನಿಲ್ಲಿಸಿದ್ದ ಆಹಾರ ಧಾನ್ಯಗಳ ಹೊತ್ತ ಲಾರಿಯನ್ನೇ ಕಳವು ಮಾಡಲಾಗಿತ್ತು. ಲಾರಿಯಲ್ಲಿದ್ದ ₹7.59 ಲಕ್ಷ ಮೌಲ್ಯದ 50 ಕೆ.ಜಿ ತೂಕದ 450 ಅಕ್ಕಿ ಪ್ಯಾಕೇಟ್‌ಗಳು ನಾಪತ್ತೆಯಾಗಿದ್ದವು. ಮರುದಿನ ಲಾರಿ ಸಿಕ್ಕರಾದರೂ, ದಾಸ್ತಾನು ಸಿಗಲಿಲ್ಲ. ಶಹಾಪುರದಲ್ಲಿ ದೂರು ದಾಖಲು.- 2023 ಜೂನ್ 11: ಶಹಾಪುರದ ದೋರನಹಳ್ಳಿ ಸಮೀಪ, ₹2.37 ಲಕ್ಷ ಮೌಲ್ಯದ 50 ಕೆಜಿ ತೂಕದ 216 ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿಕೊಂಡು ಹೊರಟಿದ್ದ ಲಾರಿ ಜಪ್ತಿ ಮಾಡಲಾಗಿತ್ತು.