ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಬೀಗ ಮುರಿದು ಅಡುಗೆ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಭಾನುವಾರ ತಡರಾತ್ರಿ ಶಾಲೆಗೆ ಆಗಮಿಸಿರುವ ಕಿಡಿಗೇಡಿಗಳು ಮದ್ಯ ಸೇವಿಸಿ ಶಾಲಾ ಕೊಠಡಿ ಬೀಗ ಮುರಿದು ಅಡುಗೆ ಕೋಣೆಯಲ್ಲಿದ್ದ ಸುಮಾರು 50 ಕೆಜಿ ಬೇಳೆ, 60 ಕೆಜಿ ಹಾಲಿನ ಪೌಡರ್ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಸೋಮವಾರ ಬೆಳಗ್ಗೆ ಶಾಲೆ ಬದಿಗೆ ಜನರು ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಪೊಲೀಸರಿಗೆ ಕಳ್ಳತನದ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ಕಳ್ಳರು ಶಾಲೆಯ ಅಡುಗೆ ಸಾಮಗ್ರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರಿಂದ ತಾಲೂಕಿನಲ್ಲಿ ಈ ರೀತಿ ಘಟನೆಗಳು ಮರುಕಳಿಸುತ್ತಿವೆ. ಹಾಲಿನ ಪೌಡರ್ ಪ್ಯಾಕೆಟ್‌ನ್ನೇ ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೆ ಸುರಪುರ ನಗರದ ಸ್ವಾಮಿ ವಿವೇಕಾನಂದ ಶಾಲೆ ಸೇರಿ ಐದು ಶಾಲೆಗಳಲ್ಲಿ ಕಳ್ಳತನ ಯತ್ನ ಮಾಡಿ ಎರಡು ಶಾಲೆಗಳಲ್ಲಿ ಹಾಲಿನ ಪೌಡರ್ ಪ್ಯಾಕೆಟ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಳ್ಳರನ್ನು ಬಂಧಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಂಡಿತ ನಿಂಬೂರ ಮನವಿ ಮಾಡಿದ್ದಾರೆ.