ಭಾನುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಯದುವೀರ್ ಅವರಿಗೆ ಕಂಕಣಧಾರಣೆ, ಕಳಸ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ನೆರವೇರಿತು. ನಂತರ ರಾಜ ಪೋಷಾಕಿನಲ್ಲಿ ಯದುವೀರ್ ಅವರು ಖಾಸಗಿ ದರ್ಬಾರ್ ಆರಂಭಿಸುತ್ತಿದ್ದಂತೆ ಗತ ಕಾಲದ ರಾಜರ ವೈಭವವು ಮರುಕಳಿಸಿತು.
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ರಾಜ ಮಹಾರಾಜರ ಗತಕಾಲದ ವೈಭವವು ಭಾನುವಾರ ಮರುಕಳಿಸಿತು. ರಾಜವಂಶಸ್ಥರಿಗಾಗಿ ಬಹುಪರಾಕ್ ಮೊಳಗಿತು.
ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್ ಹಾಲ್ ನಲ್ಲಿ ಮೈಸೂರು ರಾಜವಂಶಸ್ಥರಾದ (ಯದುವಂಶ) ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಪೋಷಾಕಿನಲ್ಲಿ 12ನೇ ಬಾರಿಗೆ ಸಿಂಹಾಸನಾರೋಹಣ ಆಗಿ ಖಾಸಗಿ ದರ್ಬಾರ್ ಮೂಲಕ ರಾಜವಂಶಸ್ಥರ ಸಂಪ್ರದಾಯ ಮುಂದುವರೆಸಿದರು.ಭಾನುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಯದುವೀರ್ ಅವರಿಗೆ ಕಂಕಣಧಾರಣೆ, ಕಳಸ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ನೆರವೇರಿತು. ನಂತರ ರಾಜ ಪೋಷಾಕಿನಲ್ಲಿ ಯದುವೀರ್ ಅವರು ಖಾಸಗಿ ದರ್ಬಾರ್ ಆರಂಭಿಸುತ್ತಿದ್ದಂತೆ ಗತ ಕಾಲದ ರಾಜರ ವೈಭವವು ಮರುಕಳಿಸಿತು.
ಯದುವೀರ್ ಅವರ ಖಾಸಗಿ ದರ್ಬಾರ್ ಗೆ ಅವರ ಪತ್ನಿ ತ್ರಿಷಿಕಾ ಕುಮಾರಿ, ಪುತ್ರರಾದ ಆದ್ಯವೀರ್, ಯುಗಾಧ್ಯಕ್ಷ, ತಾಯಿ ಪ್ರಮೋದಾದೇವಿ ಒಡೆಯರ್, ಕುಟುಂಬ ವರ್ಗದವರು, ಪುರೋಹಿತರು, ಅರಮನೆಯ ಸಿಬ್ಬಂದಿ ಸಹಕಾರ ನೀಡಿದರು.ಅರಮನೆಯಲ್ಲಿ ಸಂಪ್ರದಾಯ:
ಮೈಸೂರು ಅರಮನೆಯ ಖಾಸಗಿ ದಸರಾ ದರ್ಬಾರ್ ಭಾನುವಾರ ಬೆಳಗ್ಗೆ 6 ರಿಂದ 7.12ರ ಒಳಗೆ ಚಿನ್ನದ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ 8.35 ರಿಂದ 9.05 ರೊಳಗೆ ಯದುವೀರ್ ಅವರಿಗೆ ಚಾಮುಂಡಿ ತೊಟ್ಟಿಯಲ್ಲಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧಾರಣೆ ನೆರವೇರಿತು. ಇದಾದ ನಂತರ ವಾಣಿ ವಿಲಾಸ ಸನ್ನಿಧಾನದ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿತು.ಪ್ರಾಥಮಿಕ ಪೂಜಾಕಾರ್ಯಗಳು ಗಣಪತಿ, ಕುಲದೇವತೆ ಶ್ರೀ ಚಾಮುಂಡೇಶ್ವರಿ, ವಿಷ್ಣು, ಶಿವ, ದಿಕ್ಪಾಲಕರು, ನವಗ್ರಹಗಳು ಮುಂತಾದವರ ಆಶೀರ್ವಾದವನ್ನು ಕೋರಿಕೊಂಡು ಕಳಶ ಪೂಜೆ ನೆರವೇರಿಸುವುದರಿಂದ ಪ್ರಾರಂಭವಾಯಿತು. ಬಳಿಕ ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಯಿತು.
ದಸರಾ ಮೊದಲ ದಿನ ಎಣ್ಣೆ ಮಜ್ಜನ ಮುಗಿಸಿ ಬಂದ ಯದುವೀರ್ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ ಆರತಿ ಬೆಳಗಿ, ಪಾದಪೂಜೆ ನೆರವೇರಿಸಿದರು. ನಂತರ ರಾಜವಂಶಸ್ಥರ ಸಂಪ್ರದಾಯದಂತೆ ದರ್ಬಾರ್ ಹಾಲ್ ಗೆ ಆಗಮಿಸಿದ ಯದುವೀರ್ ಅವರು, ಬೆಳಗ್ಗೆ 11.45 ರಿಂದ 12.05ರ ಒಳಗಿನ ಶುಭ ಲಗ್ನದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನ ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಿತು.ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಶ್ರೀಕಂಠ ಮತ್ತು ಏಕಲವ್ಯ ಆನೆಗಳು ಅರಮನೆ ಖಾಸಗಿ ದರ್ಬಾರ್ ನಲ್ಲಿ ಪಟ್ಟಣದ ಆನೆಗಳಾಗಿ ಭಾಗವಹಿಸಿದ್ದವು. ಅರಮನೆಯಲ್ಲಿ ಪಟ್ಟದ ಆನೆಗಳಿಗೆ ಸೊಂಡಲು, ಕಿವಿ, ಕಾಲುಗಳು, ದೇಹಕ್ಕೆ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಸೊಂಡಿಲಿನ ಭಾಗಕ್ಕೆ ಗಂಡಭೇರುಂಡ ಚಿಹ್ನೆ ಬರೆಯಲಾಗಿತ್ತು. ಅಲಂಕಾರದ ನಂತರ ಕೋಡಿ ಸೋಮೇಶ್ವರ ದೇವಾಲಯದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ, ಪಟ್ಟದ ಹಸುವನ್ನು ಸವಾರಿ ತೊಟ್ಟಿಗೆ ಕರೆ ಕಂದು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ದಸರಾ ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ಭಾನುವಾರ ನಿರ್ಬಂಧಿಸಲಾಗಿತ್ತು.