ಸುಳ್ಳು ಅರ್ಜಿ ಸಲ್ಲಿಸಿ ಮತದಾರರ ಹೆಸರು ತೆಗೆಯಲು ಯತ್ನಿಸಲಾಗುತ್ತಿದೆ ಎಂದು ಎಫ್‌ಐಆರ್‌ ದಾಖಲಾದ ವಿಚಾರವಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.

ಮಡಿಕೇರಿ: ಸುಳ್ಳು ಅರ್ಜಿ ಸಲ್ಲಿಸಿ ಮತದಾರರ ಹೆಸರು ತೆಗೆಯಲು ಯತ್ನಿಸಲಾಗುತ್ತಿದೆ ಎಂದು ಎಫ್‌ಐಆರ್‌ ದಾಖಲಾದ ವಿಚಾರವಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರಂ ನಂ 7 ಸಲ್ಲಿಕೆ ಮಾಡುವುದರಲ್ಲಿ ತಪ್ಪು ಏನಿದೆ? ಅದು ಕೇವಲ ಆಕ್ಷೇಪಣೆ ಸಲ್ಲಿಕೆ ಅಷ್ಟೇ. ನನ್ನ ಮೇಲೆ ಕೂಡ ಯಾರಾದರೂ ಫಾರಂ 7 ಸಲ್ಲಿಸಬಹುದು, ನಾನು ನೈಜ ಮತದಾರ ಅಲ್ಲ ಅಂತ ಅರ್ಜಿ ಸಲ್ಲಿಸಬಹುದು. ಆದರೆ ಎಲೆಕ್ಷನ್ ಕಮಿಷನ್ ಅದು ಸತ್ಯವೋ ಸುಳ್ಳೋ ಅಂತ ಪರಿಶೀಲಿಸುತ್ತದೆ. ಇದರಲ್ಲಿ ತಪ್ಪೇನಿದೆ ಎಂದರು.

ಕಾಂಗ್ರೆಸ್ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಅರಾಜಕತೆ ಸೃಷ್ಟಿಸಲು ಮುಂದಾಗಿವೆ. ಅವರಿಗೆ ಪ್ರಜಾಪ್ರಭುತ್ವ ಅಡಿಯಲ್ಲಿ ರಾಜಕಾರಣ ಮಾಡಲು ಬರಲ್ಲ, ಅದಕ್ಕೆ ಬೀದಿಯಲ್ಲಿ ಇಳಿದು ಹೋರಾಟ ಮಾಡಿ ಆತಂಕ ಸೃಷ್ಟಿ ಮಾಡ್ತಿವೆ. ಇಂತಹ ಆತಂಕಕ್ಕೆ ಕಾರಣ ಆಗುವವರಿಗೆ ಜನರು ಸರಿಯಾದ ಉತ್ತರ ಕೊಡಬೇಕಿದೆ ಎಂದರು.

ದೇಶದಲ್ಲಿ ಎಸ್‌ಐಆರ್‌ ದುರ್ಬಳಕೆ ಅಂತಾರೆ, ಆದರೆ ಅವರದೇ ಅಧಿಕಾರಿಗಳು ಫಾರಂ ಸ್ವೀಕರಿಸುತ್ತಾರೆ ಅಲ್ವಾ? ರಾಜ್ಯ ಸರ್ಕಾರದ ಜೊತೆ ಚುನಾವಣಾ ಆಯೋಗ ಸೇರಿಕೊಂಡು ತಾನೆ ಎಸ್ ಐ ಆರ್ ಮಾಡ್ತಿರೋದು. ಸರಿಯಾದ ರೀತಿಯಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಗೆ ಸಾಮರ್ಥ್ಯ ಇಲ್ಲ, ಹೀಗಾಗಿಯೇ ಬೀದಿಯಲ್ಲಿ ಹೋರಾಟ ಮಾಡ್ತಿದೆ. ಮೋದಿಯವರು 3 ಬಾರಿ ಪ್ರಧಾನಿ ಆಗಿದ್ದನ್ನು ಸಹಿಸಲಾಗುತ್ತಿಲ್ಲ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಲು ಕಾಂಗ್ರೆಸ್‌ಗೆ ಆಗ್ತಿಲ್ಲ, ಹೀಗಾಗಿ ಅಪಪ್ರಚಾರ ಮಾಡಿ ಸುಮ್ಮನೇ ಗೊಂದಲ ಸೃಷ್ಟಿಸ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಗೊಂದಲ ಸೃಷ್ಟಿಸುವುದು, ಅಪಪ್ರಚಾರ ಮತ್ತು ಸುಳ್ಳೇ ಅಸ್ತ್ರವಾಗಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಆದ ಬಳಿಕ ವಿಪಕ್ಷಗಳಿಂದ ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿ, ಯಾರು ಏನು ಬೇಕಾದರೂ ಆರೋಪ ಮಾಡಬಹುದು, ಆದರೆ ಸಾಕ್ಷಿ ಕೊಡಬೇಕು ಅಲ್ವಾ. ಸಾಕ್ಷಿ ಇಲ್ಲದೆ ಏನೇನೋ ಮಾತನಾಡಬಾರದು. ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡುವಾಗ ದಾಖಲೆ ಇಟ್ಟು ಮಾತನಾಡಬೇಕು ಎಂದು ಹೇಳಿದರು.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿವಾದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ನಿವಾಸಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಬಳ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿ ಬದಲಾವಣೆ ಮಾಡಿಲ್ಲ. ನಮ್ಮ ಮಾತು ಕೇಳುವುದು ಬೇಡ, ನಿಮ್ಮ ಮತದಾರರ ಮಾತನ್ನೇ ಕೇಳಿ ಎಂದಿದ್ದೇವೆ, ಆದರೆ ಇದುವರೆಗೆ ಯಾವುದೇ ಬದಲಾವಣೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.