ಸಾರಾಂಶ
ಮಹೇಂದ್ರ ದೇವನೂರು
ಮೈಸೂರು : ಆಯುಧಪೂಜೆ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಯದುವಂಶಸ್ಥರರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ನೆರವೇರಿಸಿದರು.
ನವರಾತ್ರಿ ಸಂದರ್ಭದಲ್ಲಿ ಬರುವ ಆಯುಧ ಪೂಜೆಗೆ ದೇಶದೆಲ್ಲೆಡೆ ವಿಶೇಷವಾದ ಮಹತ್ವ ನೀಡಲಾಗಿದೆ.
ಎಲ್ಲಾ ಆಯುಧಗಳನ್ನು ಇಟ್ಟು, ಅಂದು ಪೂಜೆ ಸಲ್ಲಿಸಲಾಗುತ್ತದೆ. ಅಂತೆಯೇ ಶರನ್ನವರಾತ್ರಿ ವೇಳೆ ಮೈಸೂರು ಅರಮನೆಯಲ್ಲೂ ಆಯುಧಪೂಜೆ ನಡೆಯಿತು.
ಶುಕ್ರವಾರ ಬೆಳಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನಿಶಾನೆ ಆನೆ, ಪಟ್ಟದ ಆನೆ, ಪಟ್ಟದ ಕುದುರೆ ಸಮೇತ ಪಟ್ಟದ ಕತ್ತಿ ಮತ್ತು ಇತರೆ ಆಯುಧಗಳೊಂದಿಗೆ ಅರಮನೆ ಆವರಣದ ಕೋಟೆ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿದರು.
ಅಲ್ಲಿ ಅರಮನೆ ಪೂಜಾ, ವಿಧಿ ವಿಧಾನಕ್ಕೆ ತಕ್ಕಂತೆ ಬಿಜೆ ಮಾಡಲಾಯಿತು. ಬಳಿಕ ಆಯುಧಗಳಿಗೆ ಎಣ್ಣೆಶಾಸ್ತ್ರ ನೆರವೇರಿಸಿ, ದೇವಸ್ಥಾದಿಂದ ಅರಮನೆಗೆ ಹಿಂದಿರುಗಿದರು.
ಬಳಿಕ ರಾಜಪೋಷಾಕಿನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿ, ಅಲ್ಲಿ ಇಡಲಾದ ಪಟ್ಟದಕತ್ತಿ ಮತ್ತು ಇತರೆ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳಾಷ್ಟಕ ನೆರವೇರಿತು. ಬಳಿಕ ಸಬಾರ್ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಮಹಾರಾಜರ ಲಾಂಛನಗಳಿಗೆ ಪೂಜೆ ಸಲ್ಲಿಸಲಾಯಿತು.
ನಂತರ ರಾಜವಂಶಸ್ಥರು ಬಳಸುವ ಖಾಸಗಿ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು.
ಆನೆಗಳಿಗೂ ಪೂಜೆ:
ಅರಮನೆ ಆವರಣದಲ್ಲಿ ಆನೆಗಳಿಗೂ ಪ್ರಹ್ಲಾದ್ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪೂಜೆ ಸಲ್ಲಿ ಸಿದರು. ದಸರಾದಲ್ಲಿ ಪಾಲ್ಗೊಂಡ ಎಲ್ಲಾ ಆನೆಗಳನ್ನು ಒಂದೆಡೆ ನಿಲ್ಲಿಸಿ ಅವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.
ಅರಮನೆಯ ಸ್ವಸ್ಥಾನಕ್ಕೆ ಮರಳಿದ ಚಿನ್ನದ ಅಂಬಾರಿ ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯನ್ನು ಮೈಸೂರು ಅರಮನೆಯಲ್ಲಿರುವ ಸ್ವಸ್ಥಾನದಲ್ಲಿ ಶನಿವಾರ ರಾತ್ರಿ ಇರಿಸಲಾಯಿತು.
750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆಯು ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರವನ್ನು 2 ಗಂಟೆ 18 ನಿಮಿಷದಲ್ಲಿ ತಲುಪ ಮೂಲಕ ಯಶಸ್ವಿಯಾಯಿತು.ಖಾಸ್ ಅರಮನೆ ಬಳಿ ಅಂಬಾರಿಯನ್ನು ಕ್ರೇನ್ ಬಳಸಿ ಅಭಿಮನ್ಯು ಆನೆಯ ಮೈಮೇಲೆ ಕಟ್ಟಲಾಯಿತು. ಅದೇ ರೀತಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಬಳಿ ಚಿನ್ನದ ಅಂಬಾರಿಯನ್ನು ಕ್ರೇನ್ ಸಹಾಯದಿಂದ ಇಳಿಸಿ, ಪೊಲೀಸ್ ವಾಹನದಲ್ಲಿ ಇರಿಸಿ, ಬಿಗಿ ಭದ್ರತೆಯಲ್ಲಿ ನೇರವಾಗಿ ಅರಮನೆ ತಂದು, ಅಂಬಾರಿಯ ಸ್ವಸ್ಥಾನದಲ್ಲಿ ಇರಿಸಲಾಗಿದೆ.
2 ಗಂಟೆ 18 ನಿಮಿಷದಲ್ಲಿ ಬನ್ನಿಮಂಟಪ ತಲುಪಿದ ಅಭಿಮನ್ಯು
ಮೈಸೂರು: ವಿಶ್ವವಿಖ್ಯಾತ ದಸರಾ ವಿಜಯದಶಮಿ ಮೆರವಣಿಗೆಯಲ್ಲಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯು 2 ಗಂಟೆ 18 ನಿಮಿಷದಲ್ಲಿ ಮೈಸೂರು ಅರಮನೆಯಿಂದ ಬನ್ನಿಮಂಟಪಕ್ಕೆ ತಲುಪಿತು.
ಅರಮನೆಯಿಂದ ಸಂಜೆ 5.02ಕ್ಕೆ ಆರಂಭವಾದ ಅಂಬಾರಿ ಆನೆ ಅಭಿಮನ್ಯು ನಡಿಗೆಯು ಬನ್ನಿಮಂಟಪ ಮೈದಾನಕ್ಕೆ ಸಂಜೆ 7.18ಕ್ಕೆ ತಲುಪಿತು. 5 ಕಿ.ಮೀ. ದೂರವನ್ನು ಅಭಿಮನ್ಯು ಆನೆಯು 2 ಗಂಟೆ 18 ನಿಮಿಷದಲ್ಲಿ ಕ್ರಮಸುವಲ್ಲಿ ಯಶಸ್ವಿಯಾಯಿತು.ದಸರೆಗಾಗಿ ಕಾಡಿನಿಂದ ನಾಡಿಗೆ ಬಂದಿದ್ದ 14 ಆನೆಗಳ ಪೈಕಿ 11 ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಗಜಪಡೆ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳಿಗೂ ವಹಿಸಲಾಗಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ರಾತ್ರಿ 9ರ ವೇಳೆಗೆ ಅರಮನೆಯ ಆನೆ ಬಿಡಾರಕ್ಕೆ ವಾಪಸ್ ಆಗಿವೆ.