ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ವೀರಮಾತೆ ಬೆಳವಡಿ ಮಲ್ಲಮ್ಮನವರ ಸಹೋದರತ್ವಕ್ಕೆ ಬರೋಬ್ಬರಿ 348 ವರ್ಷಗಳ ಹಿಂದೆ ಕೆತ್ತಲಾದ ಶಿಲಾಶಾಸನ ಸಾಕ್ಷಿಯಾಗಿದ್ದು, ಈ ಸಂಗತಿ ಅಷ್ಟಾಗಿ ಬೆಳಕಿಗೆ ಬಂದಿಲ್ಲ.
ಬಸವರಾಜ ಹಿರೇಮಠ
ಧಾರವಾಡ:ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮಧ್ಯದ ಸಹೋದರತ್ವ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮೀಪದ ಯಾದವಾಡ ಗ್ರಾಮದಲ್ಲಿ ನ. 11ರಂದು ಐತಿಹಾಸಿಕ ಮಹತ್ವವುಳ್ಳ ವಿಶೇಷ ಕಾರ್ಯಕ್ರಮವೊಂದು ಆಯೋಜನೆಯಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ವೀರಮಾತೆ ಬೆಳವಡಿ ಮಲ್ಲಮ್ಮನವರ ಸಹೋದರತ್ವಕ್ಕೆ ಬರೋಬ್ಬರಿ 348 ವರ್ಷಗಳ ಹಿಂದೆ ಕೆತ್ತಲಾದ ಶಿಲಾಶಾಸನ ಸಾಕ್ಷಿಯಾಗಿದ್ದು, ಈ ಸಂಗತಿ ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಇದೀಗ ನ. 11ರಂದು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಅಣ್ಣ-ತಂಗಿಯ ಹಬ್ಬ ಎಂಬ ವಿಶೇಷ ಕಾರ್ಯಕ್ರಮ ಮೂಲಕ ಐತಿಹಾಸಿಕ ಘಟನೆಯೊಂದು ನಾಡಿನ ಜನತೆಗೆ ಪರಿಚಯವಾಗಲಿದೆ.ಏನಿದು ಇತಿಹಾಸ?:
ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಕ್ಕೂ ಹಾಗೂ ಬೆಳವಡಿ ಮಲ್ಲಮ್ಮನವರ ಮಧ್ಯೆ 1678ರಲ್ಲಿ ಅಚಾತುರ್ಯವಾಗಿ ಯುದ್ಧ ನಡೆದು, ಕೊನೆಗೆ ನಮ್ಮಲ್ಲಿಯೇ ಯುದ್ಧ ಏತಕ್ಕೆಂದು ಇಬ್ಬರೂ ಇನ್ಮುಂದೆ ಅಣ್ಣ-ತಂಗಿಯಂತೆ ಇರಲು ಒಪ್ಪಂದ ಮಾಡಿಕೊಂಡರು. ಜೊತೆಗೆ ಭವಿಷ್ಯದಲ್ಲಿ ಬೆಳವಡಿಯ ಸಂಸ್ಥಾನದ ಜೊತೆಗೆ ಯಾರೂ ಯುದ್ಧಕ್ಕೆ ಬಾರದ ರೀತಿಯಲ್ಲಿ ಶಿವಾಜಿ ಸೈನ್ಯವು ರಕ್ಷಣೆ ನೀಡುವುದಾಗಿ ಶಿವಾಜಿ ಮಹಾರಾಜರು ಬೆಳವಡಿ ಮಲ್ಮಮ್ಮನವರಿಗೆ ಮಾತು ಕೊಟ್ಟರು. ಈ ಸವಿ ನೆನಪಿಗಾಗಿ ಛತ್ರಪತಿ ಶಿವಾಜಿ ಮಹಾರಾಜರ, ಬೆಳವಡಿ ಮಲ್ಲಮ್ಮ ಹಾಗೂ ಪುತ್ರ ನಾಗಭೂಷಣ ಇರುವ ವೀರಗಲ್ಲನ್ನು ಶಿವಾಜಿ ಅವರ ಸೊಸೆ ತಾರಾಬಾಯಿ ಅವರು ಕೆತ್ತಿಸಿ ಅದನ್ನು ಬೆಳವಡಿ ಸಮೀಪದ ಯಾದವಾಡ ಗ್ರಾಮದಲ್ಲಿ ಸ್ಥಾಪಿಸಿದ್ದಾರೆ. ಈ ವೀರಗಲ್ಲಿಗೆ ಇದೀಗ 348 ವರ್ಷಗಳು ತುಂಬಿದ್ದು, ಇಂತಹ ಮಹತ್ವದ ಸಂಗತಿಯು ಬೆಳಕಿಗೆ ಬಂದಿಲ್ಲ. ಯಾದವಾಡ-ಶಿಬಾರಗಟ್ಟಿ ಗಡಿ ಮಧ್ಯೆ ನಡೆದ ಯುದ್ಧದ ಹಿನ್ನೆಲೆಯಲ್ಲಿ ವೀರಗಲ್ಲನ್ನು ಯಾದವಾಡದಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಸಂಶೋಧಕ ಡಾ. ಬಾಳಪ್ಪ ಚಿನಗುಡಿ ದಾಖಲಿಸಿದ್ದಾರೆ ಎಂದು ಸಂಘಟಕ ನರಸಪ್ಪ ಭಟ್ಟಂಗಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.11ರಂದು ರಾಜ ವಂಶಸ್ಥರ ಆಗಮನ:
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವೀರಮಾತೆ ಬೆಳವಡಿ ಮಲ್ಲಮ್ಮನವರ ವಂಶಸ್ಥರಾದ ನಾಗರಾಜ ದೇಸಾಯಿ ಚಚಡಿ ಕುಟುಂಬ, ವಿಶ್ವನಾಥ ಪಾಟೀಲ ಕುಟುಂಬ, ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಶಿವೇಂದ್ರ ಸಿಂಹರಾಜೆ ಬೋಸಲೆ ಹಾಗೂ ಕಿತ್ತೂರು ರಾಣಿ ಚೆನಮ್ಮಾಜಿ, ಕೆಳದಿ ಚೆನ್ನಮ್ಮಾಜಿ ಮತ್ತು ಶಿವಾಜಿ ಮಹಾರಾಜರ ಸೇನಾಧ್ಯಕ್ಷರಾದ ಹಂಬೀರ ರಾವ್ ಮೊಹಿತೇಜ್ ಅವರ ವಂಶಸ್ಥರು ಆಗಮಿಸುತ್ತಿರುವುದು ಮಹತ್ವದ ಸಂಗತಿಯೇ ಹೌದು.ಯಾದವಾಡದಲ್ಲಿ 348 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ಈ ವೀರಗಲ್ಲು ದೇಶದಲ್ಲಿಯೇ ಶಿವಾಜಿ ಮೂರ್ತಿಯ ಮೊದಲ ಕೆತ್ತನೆ ಎಂದು ಹೇಳಲಾಗತ್ತಿದೆ. ಈ ಐತಿಹಾಸಿಕ ವೀರಗಲ್ಲು, ಅದರ ಇತಿಹಾಸ ನಾಡಿಗೆ ಪರಿಚಯವಾಗುವ ಮೂಲಕ ಕರ್ನಾಟಕ-ಮಹಾರಾಷ್ಟ್ರದಲ್ಲಿ ಆಗಗ ನಡೆಯುತ್ತಿರುವ ಭಾಷೆ ಮತ್ತು ಗಡಿ ವಿಚಾರಕ್ಕೆ ಇನ್ನಾದರೂ ಬ್ರೇಕ್ ಬೀಳಲಿ ಎಂಬುದು ಈ ಅಣ್ಣ-ತಂಗಿ ಕಾರ್ಯಕ್ರಮದ ಆಶಯವಾಗಿದೆ. ಐತಿಹಾಸಿಕ ಸ್ಥಳವಾಗಲಿ ಯಾದವಾಡ..
ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿರುವುದು ನಮ್ಮ ಪುಣ್ಯ. ಅಂದು ಧಾರವಾಡದ ಮರಾಠಾ ಕಾಲನಿಯಿಂದ ಶಿವಾಜಿ ಮೂರ್ತಿ ಮೆರವಣಿಗೆಯು ಬರಲಿದೆ. ಬೆಳವಡಿಯಿಂದ ವೀರಮಾತೆ ಮಲ್ಲಮ್ಮನ ಮೂರ್ತಿಯೂ ಮೆರವಣಿಗೆ ಬಂದು ಯಾದವಾಡ ಗ್ರಾಮದ ಹನುಮಂತ ದೇವರ ಗುಡಿ ಎದುರು ಸಂಗಮವಾಗಲಿದೆ. ನಂತರ ಇಬ್ಬರ ಮೂರ್ತಿಗಳ ಮೆರವಣಿಗೆ ಗ್ರಾಮದಲ್ಲಿ ನಡೆದು, ಶಿವಾಜಿ ವಂಶಸ್ಥರಿಗೆ ಬೆಳವಡಿಯ ಮಲ್ಲಮ್ಮ ವಂಶಶ್ಥರಿಂದ ಕಂಕಣ ಕಟ್ಟಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಯಾದವಾಡ ಗ್ರಾಮ ಐತಿಹಾಸಿಕ ಸ್ಥಳ ಮಾಡುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎನ್ನುತ್ತಾರೆ ಯಾದವಾಡ ಗ್ರಾಮದ ಮುಖಂಖ ಮೃತ್ಯುಂಜಯ ಹಿರೇಮಠ ಹಾಗೂ ಸಂಘಟಕ ವಿನಾಯಕ ಜೋಶಿ.