ಸಾರಾಂಶ
ಉಡುಪಿ : ಇಲ್ಲಿನ ಮಣಿಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಇವರ ಸಹಕಾರದೊಂದಿಗೆ ನಡೆಯುವ 2025 -26 ನೇ ಸಾಲಿನ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ, ಟ್ರಸ್ಟಿನ ವತಿಯಿಂದ ಯಕ್ಷಗಾನ ತರಬೇತಿ ಮತ್ತು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಯಕ್ಷಶಿಕ್ಷಣ ಟ್ರಸ್ಟ್ ನ ವಿಶ್ವಸ್ಥ ನಾರಾಯಣ ಎಂ.ಹೆಗಡೆ ಶುಭ ಹಾರೈಸಿದರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ ಹಾಗೂ ಯಕ್ಷಗಾನ ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ಡಯಟ್ ಪ್ರಾಂಶುಪಾಲರಾದ ಡಾ.ಅಶೋಕ ಕಾಮತ್ ಅವರು ಯಕ್ಷಗಾನದಿಂದ ಆಗುವ ಪ್ರಯೋಜನ ಹಾಗೂ ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯವನ್ನು ಶ್ಲಾಘಿಸಿದರು.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರೂಪರೇಖಾ ಎಚ್. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಸಹ ಶಿಕ್ಷಕ ನಾಗರಾಜ್ ಅವರು ಧನ್ಯವಾದ ಸಲ್ಲಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.