ಯಕ್ಷಗಾನ ಕಲೆ ಉಳಿಯಲು ಹೊಸ ಮೇಳಗಳ ಅಗತ್ಯವಿದೆ: ಡಾ.ತಲ್ಲೂರು

| Published : Jan 19 2024, 01:45 AM IST

ಯಕ್ಷಗಾನ ಕಲೆ ಉಳಿಯಲು ಹೊಸ ಮೇಳಗಳ ಅಗತ್ಯವಿದೆ: ಡಾ.ತಲ್ಲೂರು
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಏಳೂರು ಮೊಗವೀರ ಮಹಾಜನ ಸಂಘದಲ್ಲಿ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಯಕ್ಷಗಾನ ಬಯಲಾಟ ‘ಸಾಗರ ಸಂಗಮ’ ಪ್ರದರ್ಶನ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಕರ್ನಾಟಕ ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನಕ್ಕೆ ಉಡುಪಿ ಜಿಲ್ಲೆಯಲ್ಲಿ ಸಿಗುತ್ತಿರುವ ಪ್ರೋತ್ಸಾಹ ಕಂಡಾಗ ಧನ್ಯತಾ ಭಾವ ಮೂಡುತ್ತದೆ. ಇಂದು ಈ ಪರಂಪರೆಯಲ್ಲಿ ಕಲಾವಿದರು ಹೆಚ್ಚಿದ್ದಾರೆ. ಯಕ್ಷಾಭಿಮಾನಿಗಳು ಅಧಿಕವಾಗಿದ್ದಾರೆ. ಹೊಸ ಹೊಸ ಮೇಳಗಳು ಹುಟ್ಟಿ ಪ್ರದರ್ಶನ ಮಾಡುತ್ತಿರುವುದು ಯಕ್ಷಗಾನ ಕಲೆಯ ಉಳಿವಿನ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ ಎಂದು ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಏಳೂರು ಮೊಗವೀರ ಮಹಾಜನ ಸಂಘದಲ್ಲಿ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಯಕ್ಷಗಾನ ಬಯಲಾಟ ‘ಸಾಗರ ಸಂಗಮ’ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಕಲೆ ಹೊಂದಿದ ಜನಪ್ರಿಯತೆ ಇನ್ನಾವ ಜಾನಪದ ಕಲೆಯೂ ಹೊಂದಿಲ್ಲ. ಕೇವಲ ಜನಪ್ರಿಯತೆ ಮಾತ್ರವಲ್ಲ, ಈ ಕಲೆಯನ್ನು ನಂಬಿಕೊಂಡಿರುವ ಕಲಾವಿದರಿಗೂ ಇಲ್ಲಿ ಆಶ್ರಯ ಸಿಗುತ್ತದೆ. ಕಲೆ, ಕಲಾವಿದರನ್ನು ಕಟ್ಟಿಕೊಂಡು ಮೇಳವನ್ನು ಹುಟ್ಟು ಹಾಕಿದ ಯಜಮಾನರಿಗೂ ಈ ಕಲೆ ಕೈ ಬಿಡುವುದಿಲ್ಲ ಎನ್ನುವಾಗ ಈ ಯಕ್ಷ ಸಂಸ್ಕೃತಿ ಅದೆಷ್ಟು ಶ್ರೀಮಂತ ಎನ್ನುವುದನ್ನು ನಾವು ಅರಿಯಬೇಕು. ನವರಸಗಳನ್ನು ತನ್ನಲ್ಲಿ ಹುದುಗಿಸಿಕೊಂಡು ಸಂಪೂರ್ಣ ಮನೋರಂಜನೆ ನೀಡಬಲ್ಲ ಈ ಏಕೈಕ ಕಲೆಯ ಉಳಿವು, ಬೆಳವಣಿಗೆಗೆ ಸಂಘ ಸಂಸ್ಥೆಗಳ ಪ್ರೋತ್ಸಾಹ ಬೆಂಬಲ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಯಕ್ಷ ಪ್ರೋತ್ಸಾಹಕ ಉದ್ಯಮಿ ಗೋಪಾಲ ಸಿ.ಬಂಗೇರ ಮಾತನಾಡಿ, ಯಕ್ಷಗಾನ ಕಲೆಗೆ ಇಂದು ರಾಜಾಶ್ರವಿಲ್ಲದಿದ್ದರೂ, ಅದಕ್ಕೆ ಡಾ.ತಲ್ಲೂರು ಅವರಂತಹ ಪ್ರೋತ್ಸಾಹಕರು ಈ ಕಲೆಯ ಉಳಿವಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಇಂತಹ ಸುಮನಸ್ಕರದಿಂದಲೇ ಯಕ್ಷಗಾನಕ್ಕೆ ಭದ್ರ ಭವಿಷ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ರವಿ, ವಿಜಯ ಕುಮಾರ್ ಹಾಗೂ ಮೆಕ್ಕೆಕಟ್ಟು ಮೇಳದ ಯಜಮಾನ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ದೇವದಾಸ್ ಈಶ್ವರಮಂಗಳ ವಿರಚಿತ ‘ಸಾಗರ ಸಂಗಮ’ ಯಕ್ಷಗಾನ ಪ್ರದದರ್ಶನಗೊಂಡಿತು.