ಯಕ್ಷಗಾನ ಕಲಾವಿದರಿಗೆ ಮಾಸಾಶನ ಸಿಗಲಿ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Sep 24 2024, 01:46 AM IST / Updated: Sep 24 2024, 01:47 AM IST

ಯಕ್ಷಗಾನ ಕಲಾವಿದರಿಗೆ ಮಾಸಾಶನ ಸಿಗಲಿ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಆರ್ಗೋಡು ಮೋಹನದಾಸ ಶೆಣೈ ಹಾಗೂ ಚಿಂತನಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಬಡತನದಲ್ಲಿಯೇ ಕಲೆಗಾಗಿ ತಮ್ಮ ಜೀವನವನ್ನು ಸವೆಸುತ್ತಿರುವ ಅರ್ಹ ಯಕ್ಷಗಾನ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ಸಿಗುವಂತಾಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿಮೈದಾನದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ರ್ಗೋಡು ಮೋಹನದಾಸ ಶೆಣೈ ಮತ್ತು ಉದಯೋನ್ಮುಖ ಪ್ರತಿಭೆ ಚಿಂತನಾ ಹೆಗಡೆ ಮಾಲ್ಕೋಡ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಲೆ, ಸಂಸ್ಕೃತಿ ಉಳಿಸುವಲ್ಲಿ ಯಕ್ಷಗಾನ ಕಲಾವಿದರ ಶ್ರಮ ಅನನ್ಯ. ಕೊರೋನಾ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ಜೀವನ ನಡೆಸುವುದೆ ಕಷ್ಟವಾಗಿತ್ತು ಎಂದು ನೆನಪಿಸಿಕೊಂಡರು.

ಆಧುನಿಕತೆ ಭರಾಟೆಯಲ್ಲಿ ಯಕ್ಷಗಾನ ಪ್ರದರ್ಶನ ಕಡಿಮೆಯಾಗುತ್ತಿದೆ. ಈ ಕಲೆಗೆ ಸೂಕ್ತ ಪ್ರೋತ್ಸಾಹ ಅಗತ್ಯ. ಆದರೂ ಈ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಕೆ ಶಿಬಿರಗಳನ್ನು ಅಲ್ಲಲ್ಲಿ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇದರ ಜೊತೆಗೆ ಯಕ್ಷಗಾನ ಸಂಘಟಕರಿಗೆ ಉತ್ತಮ ಸಹಕಾರ ನೀಡಬೇಕು. ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಮಾತನಾಡಿ, ಸನ್ಮಾನಿತ ಮೋಹನದಾಸ ಶೆಣೈ ಅವರ ಗರಡಿಯಲ್ಲಿ ಅನೇಕ ಕಲಾವಿದರು ಬೆಳೆದಿದ್ದಾರೆ. ಕಲೆ ಉಳಿಸಲು ಕೇವಲ ಕಲಾವಿದರು ಮತ್ತು ಸಂಘಟಕರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಹೃದಯ ಕಲಾಭಿಮಾನಿ ಪ್ರೇಕ್ಷಕ ವೃಂದವೂ ಬೇಕು. ರಾಜ್ಯ ಪ್ರಶಸ್ತಿ ಪುರಸ್ಕೃತ ಶೆಣೈ ಅವರನ್ನು ಈ ನೆಲದಲ್ಲಿ ಸನ್ಮಾನಿಸುವ ಭಾಗ್ಯ ನಮ್ಮೆಲ್ಲರಿಗೂ ದೊರಕಿದೆ. ಹಾಗೆಯೇ ಉದಯೋನ್ಮುಖ ಪ್ರತಿಭೆ ಚಿಂತನಾ ಹೆಗಡೆಯವರು ಬಡಗುತಿಟ್ಟಿನಲ್ಲಿ ಶ್ರೇಷ್ಠ ಕಲಾವಿದೆಯಾಗಿ ಬೆಳಗಲಿ ಎಂದು ಹಾರೈಸಿದರು.

ಪತ್ರಕರ್ತ ಎಸ್.ವಿ.ಹಿತಕರ ಜೈನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ರ್ಗೋಡು ಮೋಹನದಾಸ ಶೆಣೈ ಮತ್ತು ಉದಯೋನ್ಮುಖ ಮಹಿಳಾ ಭಾಗವತೆ ಚಿಂತನಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಂಘಟಕ ಗಣಪತಿ ಶಿರಳಗಿ, ತ್ರಿಲೋಚನ ಹೆಗಡೆ ಹಾಜರಿದ್ದರು.

ನಂತರ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಶ್ರೀ ರಾಮಾಂಜನೇಯ ಮತ್ತು ಮಾತೆ ಜಗನ್ಮಾತೆ ಯಕ್ಷಗಾನ ಪ್ರದರ್ಶನ ನಡೆಯಿತು.