ಸಾರಾಂಶ
ಉದ್ಯಾವರದ ಸಂಗಮ ಸಾಂಸ್ಕೃತಿಕ ವೇದಿಕೆ ಬಾಲ ಕಲಾವಿದರಿಂದ ಮಾಂಗೋಡು ಶ್ರೀ ಸುಬ್ರಮಣ್ಯ ಷಷ್ಠಿಯ ಪ್ರಯುಕ್ತ ದೇವಸ್ಥಾನದ ಬಳಿ ‘ರುಗ್ಮಾವತಿ ಕಲ್ಯಾಣ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಉದ್ಯಾವರದ ಸಂಗಮ ಸಾಂಸ್ಕೃತಿಕ ವೇದಿಕೆ ಬಾಲ ಕಲಾವಿದರಿಂದ ಮಾಂಗೋಡು ಶ್ರೀ ಸುಬ್ರಮಣ್ಯ ಷಷ್ಠಿಯ ಪ್ರಯುಕ್ತ ದೇವಸ್ಥಾನದ ಬಳಿ ‘ರುಗ್ಮಾವತಿ ಕಲ್ಯಾಣ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಮನ್ ಪಿ. ಬಂಗೇರ ಮಾತನಾಡಿ, ಈ ಸಂಸ್ಥೆಯು ಅನೇಕ ಜನಪರ ಕಾರ್ಯಗಳನ್ನು ವರ್ಷವಿಡೀ ಹಮ್ಮಿಕೊಂಡಿರುತ್ತದೆ. ಅದರ ಜೊತೆಗೆ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಭಜನೆ, ಕುಣಿತ ಭಜನೆ, ನಾಟಕ, ನಾಸಿಕ್ ಬ್ಯಾಂಡ್ ತರಬೇತಿ, ಆಟಿಡ್ ಒಂಜಿ ದಿನ, ಸಾರ್ವಜನಿಕ ಗಣೇಶೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಚಿತ್ರಕಲಾ ಸ್ಪರ್ಧೆ, ಹೋಳಿ ಹಬ್ಬದ ಆಚರಣೆ, ದೀಪಾವಳಿ ಹಬ್ಬದ ಆಚರಣೆ, ಸ್ವಚ್ಛತಾ ಅಭಿಯಾನ ಹಾಗೂ ಊರಿನ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತದೆ ಎಂದು ಶ್ಲಾಘಿಸಿದರು.ಕಾನಂಗಿ ದೇವಸ್ಥಾನದ ಶ್ರೀ ರಾಧಾಕೃಷ್ಣ ಭಟ್ ಕುತ್ಪಾಡಿ ಮಾತನಾಡಿ, ಈ ಸಂಸ್ಥೆಯು ನಮ್ಮೂರಿನಲ್ಲಿ ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಸದಾ ಸಹಕಾರ ನೀಡುವ ಭರವಸೆ ನೀಡಿದರು.ವಿಶ್ವಕರ್ಮ ಸಮಾಜದ ಮುಂದಾಳು ವೆಂಕಟೇಶ ಆಚಾರ್ಯ ಕುತ್ಪಾಡಿ, ಸಮಾಜಸೇವಕ ಪ್ರತಾಪ್ ಕುಮಾರ್ ಉದ್ಯಾವರ ಸಂಸ್ಥೆಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮುಖ್ಯಸ್ಥ ಸುಬ್ರಹ್ಮಣ್ಯ ಎಸ್. ನಾಯಕ್ ಹಾಗೂ ಜಯಶ್ರೀ ನಾಯಕ್, ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಸಂಪಿಗೆ ನಗರ, ಸುಜಾತಾ ಗಣೇಶ್ ಸಂಪಿಗೆ ನಗರ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಗಣೇಶ್ ಕುಮಾರ್ ಸಂಪಿಗೆ ನಗರ ಪ್ರಸ್ತಾವಕ ಮಾತುಗಳನ್ನಾಡಿದರು. ಸಲೀಂ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.