ಯಕ್ಷಗಾನ ಸಂಸ್ಕೃತಿ, ಪರಂಪರೆಯ ಪ್ರತೀಕ: ನೀರ್ನಳ್ಳಿ ರಾಮಕೃಷ್ಣ

| Published : Apr 12 2024, 01:05 AM IST

ಸಾರಾಂಶ

ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತಿರುವುದು ಶ್ಲಾಘನೀಯವಾಗಿದೆ.

ಸಿದ್ದಾಪುರ: ತಾಲೂಕಿನ ಗಾಳೀಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ದಂಟಕಲ್ಲಿನ ಯಕ್ಷಚಂದನ ಸಂಸ್ಥೆಯ ದಶಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ಯಕ್ಷಸಂಜೆ ಕಾರ್ಯಕ್ರಮ ಜರುಗಿತು.

ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಸಂಸ್ಕೃತಿ, ಪರಂಪರೆ ಬೇರೆಯವರಿಗೆ ಮಾದರಿ ಆಗಿದೆ. ಅದರಲ್ಲಿಯೂ ಮುಖ್ಯವಾಗಿ ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತಿರುವುದು ಶ್ಲಾಘನೀಯವಾಗಿದೆ. ಯಕ್ಷಗಾನ ನನ್ನ ಜೀವನದ ಮೊದಲ ವೇದಿಕೆ ಎನ್ನುವುದನ್ನು ತಿಳಿಸಿದ ಅವರು, ಯಕ್ಷಗಾನಕ್ಕೆ ಬದ್ಧತೆ ಇದೆ. ಅಲ್ಲದೇ ಭಾಷಾಶ್ರೇಷ್ಠತೆ ಇರುವುದಲ್ಲದೇ ಮಠಮಾನ್ಯರೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಕಲೆಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದರು.

ಡಾ. ಕೃಷ್ಣಮೂರ್ತಿ ರಾಯ್ಸದ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಕಲೆ, ಸಾಹಿತ್ಯವನ್ನು ಒಳಗೊಂಡಿರುವ ಯಕ್ಷಗಾನಕ್ಕೆ ಅದರದ್ದೆ ಆದ ಚೌಕಟ್ಟಿದ್ದು, ಅದನ್ನು ಮೀರಬಾರದು ಎಂದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಸತೀಶ ಉಪಾಧ್ಯ ಅಂಬಲಪಾಡಿ ಉಡುಪಿ ಅವರಿಗೆ ಸತೀಶ ಉಪಾಧ್ಯ ಶಿಷ್ಯಬಳಗದವರು ಗುರುವಂದನೆ ಸಲ್ಲಿಸಿದರು. ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ. ಶ್ರೀಧರ ವೈದ್ಯ ಸಿದ್ದಾಪುರ, ಅನಂತಮೂರ್ತಿ ಹೆಗಡೆ ಶಿರಸಿ ಮಾತನಾಡಿದರು.

ಶ್ರೀಕಾಂತ ಹೆಗಡೆ ಶಿರಸಿ, ರವೀಂದ್ರ ಹೆಗಡೆ ಹಿರೇಕೈ, ರಾಘವೇಂದ್ರ ಬೆಟ್ಟಕೊಪ್ಪ, ಅಶೋಕ ಹೆಗಡೆ ಹಿರೇಕೈ, ಲಕ್ಷ್ಮಿನಾರಾಯಣ ಹೆಗಡೆ ಮಟ್ಟೆಮನೆ ಉಪಸ್ಥಿತರಿದ್ದರು. ಸುಜಾತಾ ಹೆಗಡೆ ದಂಟಕಲ್ ಸ್ವಾಗತಿಸಿದರು. ಸತೀಶ ಹೆಗಡೆ ದಂಕಟಲ್ ಅಭಿನಂದನಾ ಮಾತನಾಡಿದರು. ಶುಭಾ ರಮೇಶ ಸನ್ಮಾನ ಪತ್ರ ವಾಚಿಸಿದರು. ರಘುಪತಿ ಹೆಗಡೆ ಹೂಡೇಹದ್ದ ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಹೆಗಡೆ ಹಾರ್ಸಿಮನೆ ವಂದಿಸಿದರು.

ನಂತರ ಯಕ್ಷಸಂಜೆ ಕಾರ್ಯಕ್ರಮದ ಅಂಗವಾಗಿ ಪ್ರದರ್ಶನಗೊಂಡ ಕಂಸವಧೆ ಯಕ್ಷಗಾನದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್, ನಂದನ ದಂಟಕಲ್, ಶಂಕರ ಭಾಗವತ, ಗಣೇಶ ಗಾಂವಕರ್ ಸಹಕರಿಸಿದರು. ಮುಮ್ಮೇಳದಲ್ಲಿ ಸತೀಶ ಉಪಾಧ್ಯ, ಅಶೋಕ ಭಟ್ಟ ಸಿದ್ದಾಪುರ, ನರೇಂದ್ರ ಅತ್ತಿಮುರುಡು, ವೆಂಕಟೇಶ ಬೊಗರಿಮಕ್ಕಿ, ನಿತಿನ್ ಹೆಗಡೆ, ಕಾರ್ತಿಕ್ ಹೆಗಡೆ, ಕು. ಧನಶ್ರೀ ಹೆಗಡೆ, ಕು. ಮೈತ್ರಿ ಸಂಪೇಸರ ಪಾತ್ರ ನಿರ್ವಹಿಸಿದರು.