ಬಾಟಂ
''''''''''''''''ಯಕ್ಷದೀವಿಗೆ'''''''''''''''' ಸಂಸ್ಥೆಯ ದಶಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಡಾ.ಎಂ. ಪ್ರಭಾಕರ ಜೋಶಿ ಅಭಿಮತಕನ್ನಡಪ್ರಭ ವಾರ್ತೆ ತುಮಕೂರು
ವಿವೇಕಾನಂದ ಅವರ ವಿವೇಕ ಹಾಗೂ ರಾಮಕೃಷ್ಣ ಪರಮಹಂಸರ ತತ್ವಗಳು ಯಕ್ಷಗಾನಕ್ಕೆ ಅತ್ಯಗತ್ಯವಾಗಿದ್ದು, ಅವರೆಲ್ಲರೂ ನಮಗೆ ಸ್ಫೂರ್ತಿಯಾಗಬೇಕು. ಯಕ್ಷಗಾನವು ಕೇವಲ ಮನರಂಜನೆಯಲ್ಲ, ಅದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಬೃಹತ್ ಕಲೆಯಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಬಹುಶ್ರುತ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ''''''''''''''''ಯಕ್ಷದೀವಿಗೆ'''''''''''''''' ಸಂಸ್ಥೆಯ ದಶಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಿದ್ದಗಂಗಾದಂತಹ ಪುಣ್ಯ ಕ್ಷೇತ್ರವಿರುವ ಊರಿನಲ್ಲಿ ಯಕ್ಷಗಾನ ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಯಕ್ಷಗಾನ ಎನ್ನುವುದು ಒಂದು ಸ್ಥಿರೀಕರಣ, ದೃಢೀಕರಣ ಮತ್ತು ಸಮೀಕರಣವಾಗಿದೆ. ವಸ್ತು, ಆಶಯ ಹಾಗೂ ಸಂಘಟನೆ ಇದರ ಮೂರು ಪ್ರಮುಖ ಸೂತ್ರಗಳಾಗಿವೆ ಎಂದರು.ಕಲೆಯ ವೇಷಭೂಷಣದ ಅರಿವಿಲ್ಲದಿದ್ದರೆ ಅದನ್ನು ಮಾಡುವುದು ವ್ಯರ್ಥ. ಕಲಾ ರೂಪಕ್ಕೆ ಪ್ರಧಾನವಾದ ಯಕ್ಷಗಾನ ಮಾಧ್ಯಮದ ಒಳಗೆ ವೇಷ ಇರಬೇಕು. ಕಥೆ, ಸ್ಥಾನ ಹಾಗೂ ಪ್ರಸಂಗಗಳ ಸ್ಪಷ್ಟ ಅರಿವು ಕಲಾವಿದರಿಗೆ ಇರಬೇಕು. ಯಕ್ಷಗಾನದ ಈಗಿನ ಆಭರಣಗಳ ತೂಕವನ್ನು ಶೇ. 30ರಷ್ಟು ಕಡಿಮೆ ಮಾಡುವ ಅವಕಾಶ ಇದೆ. ಯಕ್ಷಗಾನದಲ್ಲಿ ಸುಧಾರಣೆಗಳನ್ನು ತರಬಾರದು ಎಂದಲ್ಲ. ಆದರೆ ಅವು ಯಕ್ಷಗಾನದ ಪರಿಭಾಷೆಗೆ ಹೊಂದುವಂತಿರಬೇಕು ಎಂದರು.ಹಿರಿಯ ಯಕ್ಷಗಾನ ಕಲಾವಿದ ಗಣರಾಜ ಕುಂಬ್ಳೆ ಮಾತನಾಡಿ, ಯಕ್ಷಗಾನ ಬೆಳೆದು ಬಂದಿದ್ದೇ ಅರಮನೆ ಹಾಗೂ ಗುರುಮನೆಗಳ ಆಶ್ರಯದಲ್ಲಿ. ಸಾಧನೆ ಮಾಡಬೇಕೆಂಬ ಆಸಕ್ತಿ ಇದ್ದರೆ ಎಲ್ಲಾದರೂ ಸಾಧಿಸಬಹುದು ಎಂಬುದನ್ನು ಯಕ್ಷದೀವಿಗೆ ತೋರಿಸಿಕೊಟ್ಟಿದೆ. ತಾವೂ ಕಲಿತು, ಬೇರೆಯವರಿಗೂ ಕಲಿಸಿ, ಕನ್ನಡದ ಬಳಕೆಯನ್ನು ಹೆಚ್ಚಿಸಿದ ಹಾಗೂ ಸುಲಲಿತವಾಗಿ ಕನ್ನಡ ಮಾತನಾಡುವುದನ್ನು ಕಲಿಸಿದ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ಭಾರತೀಯ ಪರಂಪರೆಯನ್ನು ಅವಲೋಕಿಸಿದಾಗ ನಾವೇ ಪುಣ್ಯವಂತರು ಎನಿಸುತ್ತದೆ. ಮನುಷ್ಯನ ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣದ ಜೊತೆಗೆ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಅತ್ಯಗತ್ಯ. ಇಂದು ಜಾತ್ಯತೀತತೆ ಬಂದು ಎಲ್ಲಾ ಹಾಳಾಗಿಹೋಗಿದೆ ಎಂದರು.ಹಿರಿಯ ಯಕ್ಷಗಾನ ಗುರುಗಳಾದ ಕೋಡ್ಲ ಗಣಪತಿ ಭಟ್ ಅವರಿಗೆ ಯಕ್ಷದೀವಿಗೆಯ ವಾರ್ಷಿಕ ಗೌರವವನ್ನು ನೀಡಿ ಸತ್ಕರಿಸಲಾಯಿತು. ಯಕ್ಷದೀವಿಗೆ ಸಂಸ್ಥೆಯ ಅಧಿಕೃತ ಜಾಲತಾಣ ಹಾಗೂ ಯಕ್ಷದೀವಿಗೆ ನಡೆದುಬಂದ ಹಾದಿ ಎಂಬ ವಿಶೇಷ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಚಿತ್ರದುರ್ಗ, ಧಾರವಾಡ, ತುಮಕೂರು, ಬೆಂಗಳೂರು, ದಾವಣಗೆರೆ, ಮೈಸೂರು, ಕೋಲಾರ ಸೇರಿದಂತೆ ಕರಾವಳಿಯೇತರ ಪ್ರದೇಶಗಳಲ್ಲಿ ತೆಂಕುತಿಟ್ಟು ಯಕ್ಷಗಾನದ ವಿಸ್ತರಣೆಗಾಗಿ ಶ್ರಮಿಸಿದ ಗುರುಗಳು ಹಾಗೂ ಸಂಘಟಕರನ್ನು ಗೌರವಿಸಲಾಯಿತು.ಆಶ್ರಮದ ಸ್ವಾಮಿ ಧೀರಾನಂದಜೀ, ಯಕ್ಷದೀವಿಗೆ ಅಧ್ಯಕ್ಷೆ ಡಾ. ಆರತಿ ಪಟ್ರಮೆ ಉಪಸ್ಥಿತರಿದ್ದರು. ಕೋಶಾಧಿಕಾರಿ ಡಾ. ಸಿಬಂತಿ ಪದ್ಮನಾಭ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಶಶಾಂಕ ಅರ್ನಾಡಿ ವಂದಿಸಿದರು. ಡಾ. ರಾಮಕೃಷ್ಣ ಭಟ್ ನಿರೂಪಿಸಿದರು. ಯಕ್ಷದೀವಿಗೆಯ ವಿದ್ಯಾರ್ಥಿಗಳಿಂದ ಬಭ್ರುವಾಹನ ಕಾಳಗ, ನರಕಾಸುರ ಮೋಕ್ಷ, ಇಂದ್ರಜಿತು ಕಾಳಗ ಎಂಬ ಯಕ್ಷಗಾನ ಪ್ರದರ್ಶನಗಳು ನಡೆದವು.
