ಪಟ್ಟೆಯ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಶನಿವಾರ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಪುತ್ತೂರು: ಜಗತ್ತಿನಲ್ಲಿ ಇಡೀ ರಾತ್ರಿ ನಡೆಯುವ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ. ಕಟೀಲು ದೇವರಿಗೆ ಅತ್ಯಂತ ಪ್ರಿಯವಾದುದು. ದೇವರ ಚರಿತ್ರೆಯನ್ನು ಜನರಿಗೆ ತಿಳಿಸುವ ಮಾಧ್ಯಮವಾಗಿ ಯಕ್ಷಗಾನ ಕೆಲಸ ಮಾಡುತ್ತಿದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಹೇಳಿದ್ದಾರೆ.ಪಟ್ಟೆಯ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಶನಿವಾರ ಆಯೋಜಿಸಲಾದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು. ದೇವರು ಬಂದು ಯಕ್ಷ ಗಾನ ನೋಡುತ್ತಾರೆ ಎನ್ನುವ ನಂಬಿಕೆ ಇದೆ. ಯಕ್ಷಗಾನ ಕಲೆ ಅಪಾರವಾದ ಶಕ್ತಿಯನ್ನು ಹೊಂದಿದೆ ಎಂದರು.

ಕನ್ನಡ ಮಾಧ್ಯಮಕ್ಕೆ ಶಾಲೆಗಳಲ್ಲಿ ಅಧ್ಯಾಪಕರ ನೇಮಕ ಆಗಿಲ್ಲ ಹಲವು ವರ್ಷಗಳೇ ಕಳೆದಿವೆ. ಆದರೆ ಆಂಗ್ಲ ಮಾಧ್ಯಮಕ್ಕೆ ಎಲ್ಲಾ ಕಡೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ದೇವಾಲಯಗಳ ಮೂಲಕವೂ ಶಾಲೆ ಉಳಿಸುವ ಪ್ರಯತ್ನ ಅಭಿನಂದನಾರ್ಹ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪರೋಕ್ಷ ರೂಪದಲ್ಲಿ ದೇವರು ಕಾರಣ ಆಗುವುದು ಉತ್ತಮ ಬೆಳವಣಿಗೆ ಎಂದರು.ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿದ್ದರು.ಪಟ್ಟೆಯ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಅಚ್ಯುತ ಭಟ್ ಪಾದೆಕರ್ಯ ಹಾಜರಿದ್ದರು. ಬಯಲಾಟ ಸಮಿತಿ ಪ್ರಮುಖರಾದ ಪದ್ಮನಾಭ ರೈ ಅರೆಪ್ಪಾಡಿ, ರಘುರಾಮ, ಸುಬ್ಬಪ್ಪ ಪಾಟಾಳಿ ಅತಿಥಿಗಳನ್ನು ಗೌರವಿಸಿದರು.ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಕೆ. ವಂದಿಸಿದರು. ಪ್ರಾಧ್ಯಾಪಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಸಾವಿರಕ್ಕೂ ಮಿಕ್ಕಿ ಮಂದಿ ವೀಕ್ಷಿಸಿದರು.