ಸಾರಾಂಶ
ಕುಮಟಾ: ಯಕ್ಷಗಾನ ಕಲೆಯಲ್ಲಿ ನೃತ್ಯ, ಸಂಗೀತ, ಸಾಹಿತ್ಯ, ಭಾಗವತಿಕೆ ಎಲ್ಲವೂ ಇದೆ. ಜನರನ್ನು ಆಕರ್ಷಿಸುವ ಕಲೆ ಇದಾಗಿದೆ. ಇತ್ತೀಚೆಗೆ ಉಪನ್ಯಾಸಕರು, ಸಂಶೋಧಕರು, ವಿದ್ಯಾವಂತರು ಕೂಡಾ ಯಕ್ಷಗಾನದಲ್ಲಿ ಪ್ರಬುದ್ಧ ಕಲಾವಿದರಾಗಿ ತೊಡಗಿಸಿಕೊಂಡು ಕಲೆಯನ್ನು ಆರಾಧಿಸುತ್ತಿರುವುದು ಜನಪದ ಕಲೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನವ ಚಿಂತನ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಶುಕ್ರವಾರ ಕೂಜಳ್ಳಿ ಮೋಹನ ನಾಯ್ಕ ಅವರ "ಬಯಲಾಟ-ಬಣ್ಣದ ಮನೆ " ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಬಯಲಾಟ ಬಣ್ಣದ ಮನೆ ಕೃತಿಯ ಮೂಲಕ ಕಲೆಯನ್ನು, ಕಲಾವಿದರ ಬದುಕನ್ನು, ಕಲಾ ಚರಿತ್ರೆಯನ್ನು ಅನಾವರಣಗೊಳಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಯಕ್ಷಗಾನಕ್ಕೆ ನಮ್ಮ ಜಿಲ್ಲೆಯ ಕಲಾವಿದರು ಅಪಾರವಾದ ಕೊಡುಗೆ ನೀಡಿದ್ದರೂ ಯಕ್ಷಗಾನ ಅಕಾಡೆಮಿ ನಮ್ಮ ಕಲಾವಿದರನ್ನು ನಿರ್ಲಕ್ಷಿಸಿರುವ ಬಗ್ಗೆ ವಿಷಾದವಿದೆ. ಮುಂದಿನ ದಿನಗಳಲ್ಲಿ ಕಲಾವಿದರೆಲ್ಲರೂ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಹೂವಿನ ದಂಡೆಯ ದಾರದಂತಿರುವ ಕಲಾವಿದರ ಶ್ರಮದ ಬೆಲೆ ಬಲ್ಲವನೆ ಬಲ್ಲ. ಈ ಗ್ರಂಥ ಬಯಲಾಟದ ಆವರಣದೊಳಗೆ ತನ್ನದೇ ಆದ ಮಹತ್ವ ಪಡೆದಿದೆ ಎಂದರು.ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ, ರೋಟರಿ ನಿಕಟಪೂರ್ವ ಅಧ್ಯಕ್ಷ ಎನ್.ಆರ್. ಗಜು ಮಾತನಾಡಿದರು. ಕೃತಿಕಾರ ಕೂಜಳ್ಳಿ ಮೋಹನ ನಾಯಕ, ಕಸಾಪ ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ ಉಪಸ್ಥಿತರಿದ್ದರು.
ರಂಜನಾ ಆಚಾರಿ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಪ್ರೊ. ಪ್ರಮೋದ ನಾಯ್ಕ ವಂದಿಸಿದರು. ಪಿ.ಎಂ. ಮುಕ್ರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಾನಂದ ನಾಯಕ, ಸಾಹಿತಿಗಳಾದ ಮೋಹನ ಹಬ್ಬು, ಬೀರಣ್ಣ ನಾಯಕ, ರಾಜೀವ ನಾಯ್ಕ, ಗಣಪತಿ ಕೊಂಡದಕುಳಿ, ಕಲಾವಿದರಾದ ಬೀರಣ್ಣ ನಾಯಕ, ಈಶ್ವರ ನಾಯ್ಕ, ಬೊಮ್ಮಯ್ಯ ಗಾಂವಕರ ಇನ್ನಿತರರು ಇದ್ದರು.