ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ರಂಗಭೂಮಿಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಹೊಸ ಮಜಲನ್ನು ಸೃಷ್ಟಿಸುತ್ತಿರುವ ಯಕ್ಷಗಾನ ಕನ್ನಡನಾಡಿನ ಹೆಮ್ಮೆಯ ಕಲೆಯಾಗಿದೆ. ಸನಾತನ ಮೌಲ್ಯಗಳನ್ನು ನಿಖರವಾಗಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿಯೂ ಯಕ್ಷಗಾನ ಪರಿಣಾಮಕಾರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಇಲ್ಲಿನ ಗೋಪಾಲಗೌಡ ರಂಗಮಂದಿರದಲ್ಲಿ ಯಕ್ಷಗಾನದ ಗುರು ಶೈಲೇಶ್ ತೀರ್ಥಹಳ್ಳಿ ನೇತೃತ್ವದ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ನೆರವೇರಿಸಿ ಮಾತನಾಡಿ, ಯಕ್ಷಗಾನ ಕಲಾವಿದರು ಕೇವಲ ಹಣಕ್ಕಾಗಿ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ತಪಸ್ಸಿನಂತೆ ಈ ಕಲೆಯನ್ನು ಆರಾಧಿಸುತ್ತಾರೆ. ಅಂತವರಲ್ಲಿ ಶೈಲೇಶ್ ತೀರ್ಥಹಳ್ಳಿ ಒಬ್ಬರಾಗಿದ್ದು, ಈ ಕಲೆಯ ಮೌಲ್ಯವನ್ನು ಅರಿಯುವ ಮಾನಸಿಕತೆಯನ್ನು ಎಳೆಯ ಪ್ರಾಯದವರಲ್ಲಿ ಮೂಡಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಕರಾವಳಿ ಮೂಲದ ವಿದ್ವಾಂಸರು ಮತ್ತು ಕಲಾವಿದರು ತಮ್ಮ ಬದುಕನ್ನೇ ಈ ಕಲೆಗೆ ಮೀಸಲಾಗಿಟ್ಟವರ ಉದಾಹರಣೆಯೂ ಇದೆ. ಕರಾವಳಿಯಿಂದ ವಲಸೆ ಬಂದಿರುವವರಿಂದಾಗಿ ಮಲೆನಾಡಿನಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಲೆಯ ಮೇಲಿನ ಅಭಿಮಾನದಿಂದ ಪೋಷಕರು ಮಕ್ಕಳನ್ನು ಈ ಕೇಂದ್ರಕ್ಕೆ ಸೇರಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.ಉದ್ಯಮಿ ಅನಂತ ಪದ್ಮನಾಭಾಚಾರ್ಯ ಮಾತನಾಡಿ, ರಂಗಕಲೆಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಭಾರತೀಯತೆಯ ಶ್ರೇಷ್ಠ ಪರಂಪರೆಯನ್ನು ಮೂಡಿಸುವ ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಇಲ್ಲ. ಈ ಮಕ್ಕಳು ಇಂದಿಲ್ಲಿ ಪ್ರದರ್ಶಿಸಿದ ಪ್ರದರ್ಶನ ನಿರೀಕ್ಷೆಗೂ ಮೀರಿದೆ ಎಂದರು.
ಯಕ್ಷಗಾನದ ಗುರು ಶೈಲೇಶ್ ತೀರ್ಥಹಳ್ಳಿ ಮಾತನಾಡಿ, ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಕರಾವಳಿಯಲ್ಲಿ ಇತರೆ ಜಾನಪದ ಕಲೆಯಂತೆ ಪ್ರತ್ಯೇಕವಾಗಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಯಕ್ಷಗಾನವನ್ನು ಛದ್ಮವೇಷ ಸ್ಪರ್ಧೆಯಲ್ಲಿ ಬಳಸದೇ ಯಕ್ಷಗಾನ ಕಲೆಗೆ ಪ್ರತ್ಯೇಕವಾಗಿ ಸ್ಪರ್ಧೆ ಏರ್ಪಡಿಸುವಂತಾಗಬೇಕು ಎಂದು ಆಗ್ರಹಿಸಿದರು.ಹಿರಿಯ ಯಕ್ಷಗಾನ ಕಲಾವಿದರಾದ ದರಲಗೋಡು ಕೃಷ್ಣಜೋಯ್ಸ್ ಮತ್ತು ಮಂಗಳಗಾರು ರಮೇಶಾಚಾರ್ಯರನ್ನು ಗೌರವಿಸಲಾಯಿತು. ಯಕ್ಷಗಾನ ಚಿತ್ರಕಲೆಯಲ್ಲಿ ಬಹುಮಾನ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಪಪಂ ಸದಸ್ಯ ಸಂದೇಶ್ ಜವಳಿ, ಭಾಗವತ ದಿನೇಶ್ ಭಟ್ ಯಲ್ಲಾಪುರ, ರೋಹಿತ್ ಶೇಡ್ಗಾರ್ ಮತ್ತು ಅಂಬರೀಶ್ ಇದ್ದರು. ಸಭಾ ಕಾರ್ಯಕ್ರಮದ ನಂತರ ಕೇಂದ್ರದ ವಿಧ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗ ಜರುಗಿತು.