ಬಯಲಾಟದಲ್ಲಿ ಯಕ್ಷಗಾನ ಮಾದರಿ ಅಳವಡಿಕೆ ಬೇಡ: ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್‌.ದುರ್ಗಾದಾಸ್

| Published : Sep 12 2024, 01:50 AM IST

ಬಯಲಾಟದಲ್ಲಿ ಯಕ್ಷಗಾನ ಮಾದರಿ ಅಳವಡಿಕೆ ಬೇಡ: ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್‌.ದುರ್ಗಾದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಬಯಲಾಟದ ವೇಷಭೂಷಣಗಳ ಭಾರ ಕಡಿಮೆಗೊಳಿಸುವ ಕುರಿತು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಪೂರಕ ಕ್ರಮ ವಹಿಸಲಿದೆ.

ಬಳ್ಳಾರಿ: ಬಯಲಾಟದಲ್ಲಿ ಯಕ್ಷಗಾನ ಮಾದರಿ ಅಳವಡಿಸಬಾರದು. ಬಯಲಾಟ ಹವ್ಯಾಸಿ ಕಲಾವಿದರು ಪ್ರದರ್ಶಿಸುವ ವಿಶಿಷ್ಟ ಕಲೆ. ಹೀಗಾಗಿ, ಬೇರೆ ಕಲೆಗಳ ಮಾದರಿಯನ್ನು ಆಧಾರವಾಗಿಟ್ಟುಕೊಳ್ಳದೆ ಬಯಲಾಟದ ಮೂಲ ಸ್ವರೂಪವನ್ನು ಉಳಿಸಿಕೊಂಡೇ ಈ ಕಲಾ ಪ್ರಕಾರವನ್ನು ಅಭಿವೃದ್ಧಿಗೊಳಿಸುವ ನೆಲೆಯಲ್ಲಿ ಚಿಂತನೆಗಳು ನಡೆದು, ಕಾರ್ಯರೂಪ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ್ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ಬಯಲಾಟ ಅಕಾಡೆಮಿ ಹಮ್ಮಿಕೊಂಡಿದ್ದ ಬಯಲಾಟ ಕಲಾವಿದರು, ವಿದ್ವಾಂಸರು ಹಾಗೂ ಬಯಲಾಟ ಆಸಕ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಯಲಾಟದ ವೇಷಭೂಷಣಗಳ ಭಾರ ಕಡಿಮೆಗೊಳಿಸುವ ಕುರಿತು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಪೂರಕ ಕ್ರಮ ವಹಿಸಲಿದೆ. ಬಯಲಾಟ ಕಮ್ಮಟಗಳು, ಮುಮ್ಮೇಳ ಕಮ್ಮಟಗಳನ್ನು ಆಯೋಜಿಸಿ, ಬಯಲಾಟ ಬೆಳವಣಿಗೆ ನೆಲೆಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ. ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಯಲಾಟ ಕಮ್ಮಟ ಹಮ್ಮಿಕೊಂಡಲ್ಲಿ ಅಕಾಡೆಮಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಸುಧಾರಿತ ಬಯಲಾಟಕ್ಕೆ ತರಬೇತಿ ಕೊಡಲಾಗುವುದು. ಆಯ್ದ ಪೌರಾಣಿಕ ಕಥೆಗಳ ಸ್ಕ್ರಿಪ್ಟ್‌ ತಯಾರಿಸಿ ಎರಡು ತಾಸಿನ ಬಯಲಾಟ ಪ್ರದರ್ಶನಕ್ಕೆ ಬೇಕಾದ ಅನುಕೂಲವನ್ನು ಅಕಾಡೆಮಿಯಿಂದಲೇ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಯಲಾಟ ಕಲಾವಿದರು ಪ್ರಶಸ್ತಿಗಳ ಹಿಂದೆ ಬೀಳಬೇಡಿ. ಅದಾಗಿಯೇ ಬಂದರೆ ಬರಲಿ; ಇಲ್ಲದಿದ್ದರೆ ಸ್ಥಳೀಯ ಸಹೃದಯರ ನೆರವು ಪಡೆದು ಸ್ಥಳೀಯ ಸಂಸ್ಥೆಗಳೇ ಪ್ರಶಸ್ತಿಗಳನ್ನು ನೀಡಿ ಕಲಾವಿದರನ್ನು ಗೌರವಿಸುವಂತಾಗಲಿ. ಅಕಾಡೆಮಿಯಿಂದ ಬೇಕಾದರೆ ಅಗತ್ಯ ಸಹಕಾರ ನೀಡುವೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಬಯಲಾಟ ಕಲಾವಿದರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಿಳಿಸಿದರು. ಮಾಶಾಸನ ಇಲ್ಲದೆ ಕಲಾವಿದರು ಒದ್ದಾಡುತ್ತಿದ್ದಾರೆ. ಅಕಾಡೆಮಿಯಿಂದ ಕ್ರಮ ಕೈಗೊಳ್ಳಿ. ಬಯಲಾಟಕ್ಕೆ ಸರ್ಕಾರ ಕೊಡುವ ಸಹಾಯಧನವನ್ನು ₹50 ಸಾವಿರಗಳಿಗೆ ಹೆಚ್ಚಳ ಮಾಡಿ. ಮೂಲ ಬಯಲಾಟಕ್ಕೆ ಧಕ್ಕೆಯಾಗದಂತೆ ಶಿಕ್ಷಣಕ್ಕೆ ಪೂರಕ ಕ್ರಮ ವಹಿಸಿ. ನಾಟಕಗಳಲ್ಲಿ ರೆಕಾರ್ಡಿಂಗ್ ಮಾಡಿ ಪ್ರದರ್ಶನ ನೀಡುವ ಕೆಟ್ಟ ಚಾಳಿ ಅಲ್ಲಲ್ಲಿ ಶುರುವಾಗಿದ್ದು, ಬಯಲಾಟಕ್ಕೆ ಈ ರೀತಿಯ ಅಪಾಯವಾಗದಂತೆ ಮುಂಜಾಗ್ರತೆ ವಹಿಸಿ. ಬಯಲಾಟ ಕುರಿತು ಶಾಲಾ ಪಠ್ಯಗಳಲ್ಲಿ ಅಳವಡಿಸಿ. ಬಯಲಾಟ ಬೆಳವಣಿಗೆಗೆ ಆಗಾಗ್ಗೆ ಕಾರ್ಯಾಗಾರಗಳನ್ನು ಕೈಗೊಳ್ಳಿ. ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿಯೇ ಬಯಲಾಟ ಸಮ್ಮೇಳನ ನಡೆಸಲು ಕ್ರಮ ವಹಿಸಿ ಎಂಬುದು ಸೇರಿದಂತೆ ಅನೇಕ ಸಲಹೆಗಳನ್ನು ಕಲಾವಿದರು ಹಾಗೂ ವಿದ್ವಾಂಸರು ನೀಡಿದರು.

ಹಿರಿಯ ಲೇಖಕ ಹಾಗೂ ವಿದ್ವಾಂಸ ಡಾ. ಜಾಜಿ ದೇವೇಂದ್ರಪ್ಪ, ಹಿರಿಯ ಬಯಲಾಟ ಕಲಾವಿದರಾದ ವೀರನಗೌಡ ಸಿರುಗುಪ್ಪ, ಉತ್ತನೂರು ಬಸವನಗೌಡ, ಗುಂಡ್ಲುವದ್ದಿಗೇರಿ ತಿಮ್ಮಾರೆಡ್ಡಿ, ಎಚ್‌. ತಿಪ್ಪೇಸ್ವಾಮಿ ಮುದ್ದಟನೂರು, ಕಪ್ಪಗಲ್ ಓಂಕಾರಮ್ಮ, ಉತ್ತನೂರು ಬಸವನಗೌಡ, ವಂದವಾಗಲಿ ಪಂಪಯ್ಯಸ್ವಾಮಿ, ಮುಮ್ಮೇಳ ಕಲಾವಿದ ಈರಣ್ಣ ಕಂಪ್ಲಿ,

ಡಾ. ಮಲ್ಲಯ್ಯ ಸಂಡೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ಕರ್ಣಕುಮಾರ್, ಮಂಜುನಾಥ ಹಡಪದ, ಲೇಖಕರಾದ ಡಾ. ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ್, ದಸ್ತಗೀರ್ ಸಾಬ್ ದಿನ್ನಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಹೊನ್ನೂರಸ್ವಾಮಿ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಲಾವಿದರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಂಗನಿರ್ದೇಶಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.