ಅಂಬಿಕಾ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ, ಯಕ್ಷಗಾನ ರಂಗಪ್ರವೇಶ

| Published : Jan 24 2025, 12:48 AM IST

ಅಂಬಿಕಾ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ, ಯಕ್ಷಗಾನ ರಂಗಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸಭಾ ಕಾರ್ಯಕ್ರಮದ ನಂತರ ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ನಿರ್ದೇಶನದ, ಉಪನ್ಯಾಸಕ ಸತೀಶ್ ಇರ್ದೆ ಸಂಯೋಜನೆಯ ಶ್ರೀಕೃಷ್ಣ ಕಾರುಣ್ಯ, ಕೃಷ್ಣಲೀಲೆ, ಪಾಂಜಜನ್ಯ ಹಾಗೂ ನರಕಾಸುರ ಮೋಕ್ಷ ಯಕ್ಷಗಾನ ಪ್ರಸಂಗಗಳು ನಡೆದು ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಯಾವುದೇ ಕೆಲಸದ ಬಗ್ಗೆ ಬಾಯಿಯಲ್ಲಿ ಹೇಳುತ್ತಾ ಇರುವ ಬದಲಿಗೆ ಕೃತಿಯಲ್ಲಿ ಆಚರಿಸಿ ತೋರಿದಾಗ ವ್ಯಕ್ತಿತ್ವ ಬೆಳಗುತ್ತದೆ. ಸಾಧನೆಗಳು ದೈವದ ಕೃಪೆ ಆಗಿರುತ್ತದೆ. ನಮ್ಮಲ್ಲಿರುವ ಅಹಂ ಅನ್ನು ಮೊದಲು ತೊರೆಯಬೇಕು ಎಂದು ಹಿರಿಯ ಸಾಮಾಜಿಕ ನೇತಾರ ದಂಬೆಕಾನ ಸದಾಶಿವ ರೈ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಂಶುಪಾಲ ಡಾ.ಎಚ್‌. ಮಾಧವ ಭಟ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮ್ಮ ಉಸಿರು ನಿಂತ ಬಳಿಕವೂ ಜಗತ್ತು ನಮ್ಮನ್ನು ಸ್ಮರಿಸುವಂತಹ ಕೆಲಸವನ್ನು ನಾವು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ದಂಬೆಕಾನ ಸದಾಶಿವ ರೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರಮಟ್ಟದ ವಿದ್ಯಾಭಾರತಿ ಬಾಲವರ್ಗದ ಗಣಿತ ಮಾದರಿ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದ ೬ನೇ ತರಗತಿಯ ಸ್ವಾನಿ ಜಿ., ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿ, ರಿಲೇಯಲ್ಲಿ ತೃತೀಯ ಸ್ಥಾನ ಪಡೆದ ಹಾಗೂ ಎಸ್‌ಜಿಎಫ್‌ಐನ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ೮ನೇ ತರಗತಿಯ ದೃಶಾನ ಸುರೇಶ ಸರಳಿಕಾನ, ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಕರ್ನಾಟಕ ತಾಳವಾದ್ಯ (ಮೃದಂಗ) ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ೧೦ನೇ ತರಗತಿಯ ಅದ್ವೈತಕೃಷ್ಣ, ಸ್ಕೌಟ್ಸ್‌- ಗೈಡ್ಸ್‌ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದ ೧೦ನೇ ತರಗತಿಯ ಹಿತಾಲಿ ಪಿ. ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ದೀಪಕ್ ರೈ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಯುಕೆಜಿ ತರಗತಿಯ ಪುಟಾಣಿ ಇಶಾನ್ವಿ ಸ್ವಾಗತಿಸಿ, ಒಂದನೇ ತರಗತಿಯ ಅನ್ವಿತಾ ಎಚ್.ಪಿ. ವಂದಿಸಿದರು. ೭ನೇ ತರಗತಿಯ ಅನ್ವಿತಾ, ೯ನೇ ತರಗತಿಯ ನಿಹಾರಿಕಾ ಹಾಗೂ ಶಿಕ್ಷಕಿ ಗೌರಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ನಿರ್ದೇಶನದ, ಉಪನ್ಯಾಸಕ ಸತೀಶ್ ಇರ್ದೆ ಸಂಯೋಜನೆಯ ಶ್ರೀಕೃಷ್ಣ ಕಾರುಣ್ಯ, ಕೃಷ್ಣಲೀಲೆ, ಪಾಂಜಜನ್ಯ ಹಾಗೂ ನರಕಾಸುರ ಮೋಕ್ಷ ಯಕ್ಷಗಾನ ಪ್ರಸಂಗಗಳು ನಡೆದು ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.