ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನವನ್ನು ಮುಂಬರುವ ೪೦ ವರ್ಷಗಳವರೆಗೆ ಅನುಕೂಲವಾಗುವ ನಿಟ್ಟಿನಲ್ಲಿ ₹1 ಸಾವಿರ ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಅತ್ಯುತ್ತಮವಾದಂತ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಆಸ್ತಿ ವಿಷಯವಾಗಿ ಉಗರಗೋಳ ಗ್ರಾಮ ಪಂಚಾಯತಿಯವರು ನ್ಯಾಯಾಲಯದಲ್ಲಿ ಹೂಡಿರುವಂತ ವ್ಯಾಜ್ಯವನ್ನು ಹಿಂಪಡೆದುಕೊಂಡರೇ ಈ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಯಲ್ಲಮ್ಮಾ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಉಗರಗೋಳ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡಿದ ಅವರು, ಉಗರಗೋಳ ಗ್ರಾಮ ಪಂಚಾಯತಿ ಮತ್ತು ಯಲ್ಲಮ್ಮಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ೧೦೯೭ ಎಕರೆ ಜಮೀನಿನ ವಿಷಯವು ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಉಳಿದುಕೊಂಡಿರುವುದರಿಂದ ಇಲ್ಲಿ ಸಮಗ್ರ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗುತ್ತಿವೆ. ಕಾರಣ ಕ್ಷೇತ್ರಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಗ್ರಾಮ ಪಂಚಾಯತಿಯವರು ನ್ಯಾಯಾಲಯದಲ್ಲಿನ ವ್ಯಾಜ್ಯವನ್ನು ಹಿಂಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಉಗರಗೋಳ, ಹರಲಾಪುರ, ಯಲ್ಲಮ್ಮಾ ತಾಂಡೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೧೦೯೭ ಎಕರೆ ಭೂಮಿಲ್ಲಿ ಈಗಾಗಲೆ ೧೫೦ ಎಕರೆ ಭೂಮಿಯನ್ನು ಮೀಸಲಿಡಲಾಗಿದ್ದು, ಇದಲ್ಲದೆ ಇನ್ನು ೧೦೦ ಎಕರೆ ಭೂಮಿ ಸೇರಿಸಿ ಒಟ್ಟು ೨೫೦ ಎಕರೆ ಭೂಮಿಯನ್ನು ಉಗರಗೋಳ ಗ್ರಾಮಕ್ಕೆ ಹಾಗೂ ೪೦ ಎಕರೆ ಭೂಮಿಯನ್ನು ಯಲ್ಲಮ್ಮಾ ತಾಂಡೆಯ ಜನರ ಬೇಡಿಕೆಯನ್ವಯ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ವರ್ಷ ₹೩೦ ಲಕ್ಷಗಳ ಅನುದಾನವನ್ನು ಉಗರಗೋಳ ಪಂಚಾಯತಿಗೆ ನೀಡಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಪಂಚಾಯತಿಯ ಸದಸ್ಯರು ಒಪ್ಪಿಗೆ ನೀಡಿ ನ್ಯಾಯಾಲಯದಲ್ಲಿರುವ ತಮ್ಮ ತಕರಾರನ್ನು ಹಿಂಪಡೆದುಕೊಳ್ಳಬೇಕು ಎಂದು ತಿಳಿಸಿದರು.ಯಲ್ಲಮ್ಮಾ ದೇವಸ್ಥಾನದಲ್ಲಿ ಸರಿಯಾದಂತ ವಸತಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಭಾರತ ಹುಣ್ಣಿಮೆಗೆ ಆಗಮಿಸಿದ ೧೦ಲಕ್ಷ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರಿಗೆ ದೇವಿಯ ದರ್ಶನದ ಭಾಗ್ಯ ದೊರಕಿರುವುದು ವಿಷಾದನೀಯ. ಆ ನಿಟ್ಟಿನಲ್ಲಿ ೧೦೯೭ ಎಕರೆ ಜಾಗದಲ್ಲಿ ಉಗರಗೋಳ ಪಂಚಾಯತಿಗೆ ಅವಶ್ಯಕವಾಗಿರುವ ಭೂಮಿಯನ್ನು ಹೊರತುಪಡಿಸಿ ರಸ್ತೆಗಳು, ಪಾರ್ಕಿಂಗ್ ವ್ಯವಸ್ಥೆ, ವಸತಿ ವ್ಯವಸ್ಥೆ, ದಾಸೋಹ ಭವನ ಹಾಗೂ ಶೌಚಾಲಯ ಸೇರಿದಂತೆ ಇನ್ನು ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ದೇಶದಲ್ಲಿ ಯಲ್ಲಮ್ಮಾ ದೇವಸ್ಥಾನವನ್ನು ಒಂದು ಮಾದರಿ ದೇವಸ್ಥಾನವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.ಸಭೆಯಲ್ಲಿ ಉಗರಗೋಳ ಗ್ರಾಮ ಪಂಚಾಯತಿಯ ಕೆಲವು ಸದಸ್ಯರು ೧೦೯೭ ಎಕರೆ ಭೂಮಿಯನ್ನು ಯಲ್ಲಮ್ಮಾ ದೇವಸ್ಥಾನಕ್ಕೆ ನೀಡಿರುವ ವಿಷಯವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚಿನ ಪ್ರಮಾಣದ ಎಲ್ಲ ಭೂಮಿಯು ದೇವಸ್ಥಾನಕ್ಕೆ ಹೋದರೆ ಉಗರಗೋಳ ಗ್ರಾಮಕ್ಕೆ ಗೋಮಾಳ ಜಾಗವೇ ಇಲ್ಲದಂತಾಗುತ್ತಿದೆ. ಆದ್ದರಿಂದ ಗ್ರಾಮದ ವ್ಯಾಪ್ತಿಗೆ ಹೆಚ್ಚಿನ ಭೂಮಿಯನ್ನು ಇಟ್ಟು ಉಳಿದಂತ ಭೂಮಿಯನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವ ವಿಚಾರಕ್ಕೆ ಬಂದರೆ ಗ್ರಾಮ ಪಂಚಾಯತಿ ಸದಸ್ಯರೆಲ್ಲರೂ ಎರಡು ದಿನದಲ್ಲಿ ಸಭೆ ಮಾಡಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಪಕ್ಷಾತೀತ ಮತ್ತು ಜ್ಯಾತ್ಯಾತೀತವಾಗಿ ದೇವಸ್ಥಾನದ ಅಭಿವೃದ್ಧಿಯ ಕಡೆಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು. ಜಿ.ಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೀತಾ ಕೌಲಗಿ, ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಇಒ ಆನಂದ ಬಡಕುಂದ್ರಿ, ಡಿಎಸ್‌ಪಿ ಚಿದಂಬರ ಮಡಿವಾಳರ, ಸಿಪಿಐ ಧರ್ಮಾಕರ ಧರ್ಮಟ್ಟಿ ಹಾಗೂ ಅಧಿಕಾರಿಗಳು ಮತ್ತು ಉಗರಗೋಳ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.ಉಗರಗೋಳ ಗ್ರಾಮ ಪಂಚಾಯತಿಯವರು ದೇವಸ್ಥಾನ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಿದರೇ ಉಗರಗೋಳದಲ್ಲಿ ಪಿಯು ಕಾಲೇಜ ಪ್ರಾರಂಭಿಸಲಾಗುತ್ತಿದೆ. ದೇವಸ್ಥಾನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಲ್ಲಿ ಉಗರಗೋಳ ಗ್ರಾಮಸ್ಥರಿಗೆ ಶೇ.೫೦ರಷ್ಟು ಅನುಕೂಲ ಮಾಡಿಕೊಡಲಾಗುವುದು. ಗ್ರಾಮ ಪಂಚಾಯತಿ ಸದಸ್ಯರೆಲ್ಲರೂ ಚರ್ಚಿಸಿ ಶನಿವಾರ ಒಂದು ಉತ್ತಮ ನಿರ್ಧಾರ ಮಾಡಿ.-ವಿಶ್ವಾಸ ವೈದ್ಯ,
ಶಾಸಕರು.