ಸಾರಾಂಶ
ಮುಳಗುಂದ: ಜಿಲ್ಲೆಯ ಗಡಿ ಭಾಗದ ಗ್ರಾಮಗಳಾದ ಚಿಂಚಲಿ, ನೀಲಗುಂದ, ಕಲ್ಲೂರು ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದೆ ಬಿದ್ದಿದೆ. ಯಾವ ಜನಪ್ರತಿನಿಧಿ, ಅಧಿಕಾರಿಯಾಗಲಿ ಇತ್ತ ಕಣ್ಣು ಹಾಯಿಸುತ್ತಲೇ ಇಲ್ಲ. ಮುಳಗುಂದದಿಂದ ಚಿಂಚಲಿ ಮಾರ್ಗವಾಗಿ ಹುಬ್ಬಳ್ಳಿ ಸಂಪರ್ಕಿಸುವ ರಸ್ತೆ ಕೋಳಿವಾಡ ವರೆಗೆ ಸಂಪೂರ್ಣ ಕಿತ್ತು ಯಮಸ್ವರೂಪಿಯಾಗಿ ಪರಿಣಮಿಸಿದೆ.
ಪಟ್ಟಣದಿಂದ ಚಿಂಚಲಿ ಮಾರ್ಗವಾಗಿ ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಗದಗ ವಿಭಾಗದ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಪಡಿಸದೇ ದಶಕವೇ ಕಳೆದಿದೆ. ಮುಂದೆ ಸಾಗಿದರೆ ಹುಬ್ಬಳ್ಳಿ ತಾಲೂಕು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ನಿತ್ಯ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ರಸ್ತೆಯ ಮೇಲೆ ದಿನನಿತ್ಯ ಸಂಚರಿಸುವ ಅದೆಷ್ಟೇ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು, ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ.ಈ ರಸ್ತೆಯ ಉದ್ದಗಲಕ್ಕೂ ತಗ್ಗು-ದಿನ್ನೆಗಳಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಮಾರ್ಗವಾಗಿ ನಿತ್ಯ ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ, ಶಿರಹಟ್ಟಿ ಸಾರಿಗೆ ವಿಭಾಗದಿಂದ ನೂರಾರು ಬಸ್‌ಗಳು, ಇತರ ಭಾರಿ ವಾಹನಗಳು ಸಂಚರಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ.
ಮೂರಾಬಟ್ಟೆಯಾದ ರಸ್ತೆ: ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುವ ಹೆದ್ದಾರಿ ವರೆಗೆ ಈ ರಸ್ತೆ ಗದಗ, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕುಗಳಿಗೆ ಸೇರಿದ್ದಾಗಿದೆ. ಹೀಗಿರುವಾಗ ಒಂದು ತಾಲೂಕಿನವರು ಕಾಮಗಾರಿ ಮಾಡಿದರೆ ಇನ್ನೊಂದು ತಾಲೂಕಿನ ರಸ್ತೆ ಹದಗೆಟ್ಟಿರುತ್ತದೆ. ಮೂರು ತಾಲೂಕಿನವರು ಒಮ್ಮೆಲೇ ಕೆಲಸ ಮಾಡಿದ ನಿದರ್ಶನವೇ ಇಲ್ಲ. ಈಗ ಸದ್ಯ ಚಿಂಚಲಿಯಿಂದ ಕೋಳಿವಾಡದ ವರೆಗೆ ಯಾವ ವಾಹನಗಳೂ ಹೋಗಲಾರದಂತಹ ಸ್ಥಿತಿ ತಲುಪಿದ್ದು, ಅದರ ದುರಸ್ತಿ ಯಾವಾಗ ಎಂಬುದು ದೇವರೇ ಬಲ್ಲ.ಮಾರ್ಗ ಬದಲಾವಣೆ: ಈ ರಸ್ತೆಯಲ್ಲಿ ತಗ್ಗು, ಗುಂಡಿಗಳು ಅಧಿಕವಾಗಿದ್ದು, ಅವುಗಳ ಆಳ, ಅಗಲ ತಿಳಿಯದಂತಾಗಿದೆ. ಈ ರಸ್ತೆಯಲ್ಲಿ ಲಘು ವಾಹನಗಳ ಸಂಚಾರ ಸಾಧ್ಯವೇ ಇಲ್ಲ ಎಂಬತಿದೆ. ಒಂದು ವೇಳೆ ಈ ಮಾರ್ಗವಾಗಿ ಹೋದರೆ ವಾಹನಗಳ ಚಾಲಕ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಅವಘಡ ಕಟ್ಟಿಟ್ಟ ಬುತ್ತಿ. ದಾರಿ ದೂರವಾದರೂ ಸರಿ, ಸುರಕ್ಷಿತವಾಗಿ ತೆರಳೋಣ ಎಂದು ಎಷ್ಟೋ ಖಾಸಗಿ ವಾಹನ ಚಾಲಕರು ಹುಲಕೋಟಿ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುತ್ತಿದ್ದಾರೆ.
ಕಳೆದ ಎಂಟು ಹತ್ತು ವರ್ಷಗಳಿಂದ ಈ ರಸ್ತೆ ದುರಸ್ತಿಯಾಗದೇ ಉಳಿದಿದೆ. ಇಲ್ಲಿ ಸಂಚರಿಸುವ ವಾಹನಗಳ ಎಲ್ಲ ಬಿಡಿಭಾಗಗಳು ಬಿಚ್ಚಿ ಬೀಳುತ್ತಿವೆ. ಇನ್ನು ಸುತ್ತುವರಿದು ಹೋದರೆ 15 ಕಿಮೀ ದೂರವಾಗುತ್ತದೆ. ರಸ್ತೆ ಸರಿಪಡಿಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮುಳಗುಂದ ಪಪಂ ಮಾಜಿ ಸದಸ್ಯ ಮಹಾಂತೇಶ ಎಸ್. ಕಣವಿ ಹೇಳಿದರು.