ಕನಕಗಿರಿ: ಪಟ್ಟಣದ ಭಾವೈಕ್ಯತಾ ಶ್ರದ್ಧಾ ಕೇಂದ್ರವಾಗಿರುವ ಯಮನೂರಸ್ವಾಮಿ (ಚಾಂಗದೇವ) ಉರೂಸ್ ಸೋಮವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಉರೂಸ್ ಅಂಗವಾಗಿ ದರ್ಗಾವನ್ನು ವಿದ್ಯುತ್ ದೀಪ, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಸೋಮವಾರ ಬೆಳಗಿನ ಜಾವ ದರ್ಗಾದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ-ವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭಕ್ತರು ಮಾದಲಿ, ಸಂಡಿಗೆ, ಪಲ್ಯ ನೈವೇದ್ಯ ಸಮರ್ಪಿಸಿದರು.ಸ್ವಾಮಿಯ ದರ್ಶನಕ್ಕೆ ಸರದಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ದೀಡ್ ನಮಸ್ಕಾರ, ಬಣ್ಣದ ಕುದುರೆ, ಉಪ್ಪು, ಸಕ್ಕರೆ ಸಮರ್ಪಿಸಿ ವಿಶಿಷ್ಟ ಹರಿಕೆ ತೀರಿಸಿದರು. ಅನಾರೋಗ್ಯ, ಇಷ್ಟಾರ್ಥ ಈಡೇರಿಕೆಗೆ ಬೆಳ್ಳಿ ಬೇಡಿ ಹಾಕಿಸಿಕೊಂಡು ಕೃತಾರ್ಥರಾದರು. ಉರೂಸ್ ಹಿನ್ನೆಲೆಯಲ್ಲಿ ದರ್ಗಾ ಕಮಿಟಿ ಹಾಗೂ ಭಕ್ತರಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ರಾತ್ರಿಯಿಡಿ ದರ್ಗಾ ಬಳಿ ಕಲಾವಿದರಾದ ಬಸವರಾಜ ಲಕ್ಕುಂಡಿ ಹಾಗೂ ಹುಲಿಗೆಮ್ಮ ಅವರಿಂದ ಗೀಗೀಪದ, ಸವಾಲಿನ ಪದಗಳು ಮೂಡಿ ಬಂದವು. ಗಿಗಿ ಪದ ಕೇಳಲು ಸಾವಿರಾರು ಜನ ಜಮಾವಣೆಯಾಗಿದ್ದರು. ಸೋಮವಾರ ಬೆಳಗಿನ ಜಾವ ಗಂಧಾಭಿಷೇಕ ಮೆರವಣಿಗೆ ನಗರದ ನಾನಾ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆಯುದ್ದಕ್ಕೂ ಬಾನಂಗಳದಲ್ಲಿ ಸಿಡಿಸಿದ ಬಣ್ಣ-ಬಣ್ಣದ ಚಿತ್ತಾರದ ಪಟಾಕಿಗಳಿಂದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೊಸ ಕಳೆ ಮೂಡಿತು.ಪ್ರಮುಖರಾದ ಅಜ್ಮೀರಸಾಬ ಎಲಿಗಾರ, ಬಸವರಾಜ ಕೋರಿ, ಉಲ್ಲಾಸ ಕಬ್ಬಿಣದ, ಶರಣಪ್ಪ ದೇವರಾಳ, ವೀರೇಶ ದೇವರಾಳ, ಆನಂದ ಮಡಿವಾಳ, ರೇಣುಕಪ್ಪ ಕೋರಿ, ಶ್ರೀನಿವಾಸ, ಗಂಗಾಧರ ಗಂಗಾಮತ, ವೀರೇಶ ಮೋಚಿ, ಶಿವಕುಮಾರ ದೇವರಾಳ, ಫಕೀರ ಸ್ವಾಮಿಯವರು ಇದ್ದರು.
ಭಾವೈಕ್ಯದ ಉರೂಸ್: ಪ್ರತಿ ವರ್ಷ ಕನಕಾಚಲಪತಿ ಜಾತ್ರಾ ಸಂದರ್ಭದಲ್ಲಿ ಬರುವ ಯಮನೂರಸ್ವಾಮಿ ಉರೂಸ್ ಹಬ್ಬವನ್ನು ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಭಾವೈಕ್ಯತೆಯಿಂದ ಆಚರಿಸಿದರು. ಪ್ರತಿ ಮನೆಯಿಂದಲೂ ದರ್ಗಾಕ್ಕೆ ತೆರಳಿದ ಮಹಿಳೆಯರು ಸ್ವಾಮಿಯ ದರ್ಶನ ಪಡೆದು ಪುನೀತರಾದರು.